ಚಿಕ್ಕಮಗಳೂರು: ಭಾರೀ ಮಳೆಗೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತ

Update: 2021-05-15 15:27 GMT

ಚಿಕ್ಕಮಗಳೂರು, ಮೇ 15: ಅರಬ್ಬೀ ಸಮುದ್ರದಲ್ಲಿನ ಚಂಡಮಾರುತದ ಪರಿಣಾಮ ಶನಿವಾರ ಮುಂಜಾನೆಯಿಂದ ರಾತ್ರಿವರೆಗೂ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯರಾತ್ರಿಯಿಂದಲೇ ಧಾರಾಕಾರ ಮಳೆ ಆರ್ಭಟಿಸಿದ್ದರೆ, ಬಯಲುಸೀಮೆ ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ನಿರಂತರವಾಗಿ ಸುರಿದ ಮಳೆ ಶನಿವಾರ ರಾತ್ರಿಯೂ ಆರ್ಭಟಿಸಿತು. ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಇಡೀ ಮಲೆನಾಡು ಸ್ತಬ್ಧಗೊಂಡಿದ್ದು, ಲಾಕ್‍ಡೌನ್‍ನಿಂದ ಹೈರಾಣಾಗಿರುವ ಜನರ ಜೀವನವನ್ನು ಮತ್ತಷ್ಟು ಬಿಗಡಾಯಿಸಿತು.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಜಾನೆಯಿಂದ ಇಡೀ ದಿನ ಬಿಡುವಿಲ್ಲದೇ ಸುರಿದ ಭಾರೀ ಮಳೆ, ಗಾಳಿಗೆ ನೂರಾರು ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಪರಿಣಾಮ ನೂರಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆ ಪರಿಣಾಮ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆಗಳಿಗೂ ಹಿನ್ನಡೆ ಉಂಟಾಗಿದ್ದು, ಜನರು ಮನೆಯಿಂದ ಹೊರಬಾರದಂತಹ ವಾತಾವರಣ ನಿರ್ಮಾಣವಾಗಿತ್ತು. ಲಾಕ್‍ಡೌನ್ ಇದ್ದರೂ ಕೆಲ ಅಗತ್ಯ ಸರಕು ಸಾಗಣೆ ವಾಹನಗಳ ಓಡಾಟ ಪ್ರತಿದಿನ ಇತ್ತು. ಆದರೆ ಶನಿವಾರದ ಭಾರೀ ಮಳೆಗೆ ವಾಹನಗಳೂ ರಸ್ತೆಗಿಳಿದಿರಲಿಲ್ಲ. ಜನಸಂಚಾರವಂತೂ ಸಂಪೂರ್ಣ ಸ್ಥಗಿತಗೊಂಡಿತ್ತು.

ಧಾರಾಕಾರ ಮಳೆಯಿಂದಾಗಿ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರು, ಬಾಳೆಹೊನ್ನೂರು, ಕಳಸ ಪಟ್ಟಣಗಳಲ್ಲಿ ಚರಂಡಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆ ಮೇಲೆಯೇ ಮಳೆ ನೀರು ಹರಿಯುತ್ತಿದ್ದ ದೃಶ್ಯಗಳ ಕಂಡು ಬಂದವು.

ರಾತ್ರಿ ಹಗಲು ಧಾರಾಕಾರ ಮಳೆ ಸುರಿದ ಪರಿಣಾಮ ಮಲೆನಾಡಿನ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾಗಿದ್ದು, ಹಳ್ಳಕೊಳ್ಳಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುರುವುದರಿಂದ ನದಿ ಪಾತ್ರದ ಗ್ರಾಮಗಳ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಶನಿವಾರ ಭಾರೀ ಮಳೆಯಾಗಿದ್ದರೂ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲೂ ಶನಿವಾರ ಸಾಧಾರಣ ಮಳೆ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಅವುತಿ, ವಸ್ತಾರೆ, ಆಣೂರು, ಮಲ್ಲಂದೂರು ಹೋಬಳಿಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದರೆ, ಅಂಬಳೆ, ಕಳಸಾಪುರ, ಲಕ್ಯಾ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ದಿನವಿಡೀ ದಟ್ಟ ಮೋಡ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕಮಗಳೂರು ನಗರದ ರಾಮೇಶ್ವರ ನಗರದಲ್ಲಿ ರುಕ್ಮಿಣಿಯಮ್ಮ ಎಂಬವರ ಮನೆಯ ಗೋಡೆಗಳು ಕುಸಿದಿದ್ದು, ಶೀಟುಗಳು ಒಡೆದು ಹೋಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News