ಆಸ್ಪತ್ರೆಗಳಿಗೆ ರೆಮ್‍ಡೆಸಿವಿರ್ ನೇರ ಪೂರೈಕೆ ಕೊರತೆಗೆ ಕಾರಣ: ಔಷಧ ವ್ಯಾಪಾರಿಗಳ ಸಂಘ

Update: 2021-05-15 17:58 GMT

ಬೆಂಗಳೂರು, ಮೇ 15: ರೆಮ್‍ಡೆಸಿವಿರ್ ಚುಚ್ಚುಮದ್ದನ್ನು ನೇರವಾಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿರುವುದರಿಂದ ಕೊರೋನ ರೋಗಿಗಳ ಜೀವ ಉಳಿಸುವ ಈ ಔಷಧದ ತೀವ್ರ ಕೊರತೆಗೆ ಕಾರಣವಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕ ಸಂಘದ ರಾಜ್ಯಾದ್ಯಕ್ಷ ವಿ.ಹರಿಕೃಷ್ಣನ್ ಕಳವಳ ವ್ಯಕ್ತಪಡಿಸಿದ್ದಾರೆಂದು ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.

ಬೇಡಿಕೆಗೆ ತಕ್ಕಂತೆ ಆಮ್ಲಜನಕ ಮತ್ತು ರೆಮ್‍ಡಿಸಿವಿರ್ ಚುಚ್ಚುಮದ್ದನ್ನು ವಾರ್ ರೂಮ್‍ನ ಉಸ್ತುವಾರಿ ನೋಡಲ್ ಅಧಿಕಾರಿಗಳಿಗೆ ಒದಗಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ಯಾತನೆ ಮತ್ತು ಕಷ್ಟಗಳನ್ನು ಉಂಟುಮಾಡಿದೆ. ಕೋವಿಡ್-19 ಚಿಕಿತ್ಸೆಗಾಗಿ ರೆಮ್‍ಡಿಸಿವಿರ್ ಚುಚ್ಚುಮದ್ದನ್ನು ವೈದ್ಯರು ಸೂಚಿಸುತ್ತಾರೆ. ಆದರೆ ರೆಮ್‍ಡಿಸಿವಿರ್ ವೈಲ್ ಕೊರತೆಯಿಂದಾಗಿ ರಾಜ್ಯದಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಔಷಧ ಮಾರಾಟಗಾರರಿಗೆ ರಿಮ್‍ಡಿಸಿವಿರ್ ಚುಚ್ಚು ಮದ್ದನ್ನು ಸರಬರಾಜು ಮಾಡಿದ್ದರೆ ಈ ಕೊರತೆ ಉಂಟಾಗುತ್ತಿರಲಿಲ್ಲ. ಅಲ್ಲದೆ ಅವುಗಳ ಕಾಳ ಸಂತೆಯೂ ನಡೆಯುತ್ತಿರಲಿಲ್ಲ ಎಂದಿರುವ ಅವರು ಔಷಧ ಅಂಗಡಿಗಳಿಗೆ ತ್ವರಿತವಾಗಿ ಈ ಚುಚ್ಚುಮದ್ದನ್ನು ಸರಬರಾಜು ಮಾಡಬೇಕೆಂದು ನಮ್ಮ ಸಂಘದಿಂದ ಸರಕಾರವನ್ನು ಒತ್ತಾಯಿಸಿರುವುದಾಗಿ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.

ಔಷಧಗಳ ಬೆಲೆ ನಿಯಂತ್ರಣ ಆದೇಶ, 2013 ಅನ್ವಯ ಮತ್ತು ಕಾಂತಿವರ್ಧಕ ಕಾಯ್ದೆ-1940 ಹಾಗೂ ನಿಯಮ-1945ರ ಪ್ರಕಾರ ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧ ವ್ಯಾಪಾರಿಗಳು ಔಷಧಗಳನ್ನು ಮಾರಾಟ ಮಾಡಬೇಕಾಗುತ್ತದೆ. ಅಲ್ಲದೆ, ಭಾರತೀಯ ಸಂವಿಧಾನದ ಕಲಂ 19(1) ಅನ್ವಯ ವೃತ್ತಿ ಭದ್ರತೆ ಇದೆ. ಇದೆಲ್ಲವನ್ನೂ ಕಡೆಗಣಿಸಿ ಸರಕಾರ ಆಸ್ಪತ್ರೆಗಳಿಗೆ ನೇರವಾಗಿ ಔಷಧ ಸರಬರಾಜು ಮಾಡುತ್ತಿರುವುದು ಸರಿಯಲ್ಲ. ಸರಕಾರ ಔಷಧ ವ್ಯಾಪಾರಿಗಳ ಮೂಲಕ ರೆಮ್‍ಡಿಸಿವಿರ್ ಚುಚ್ಚುಮದ್ದುಗಳನ್ನು ಸರಬರಾಜು ಮಾಡಿ ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರವು ಈ ವಿಷಯವನ್ನು ಅರಿತುಕೊಳ್ಳುತ್ತದೆ ಮತ್ತು ನಮ್ಮ ದೇಶದ ಕಾನೂನನ್ನು ಎತ್ತಿ ಹಿಡಿದು ಔಷಧ ವ್ಯಾಪಾರಿಗಳ ಮೂಲಕ ಚುಚ್ಚುಮದ್ದನ್ನು ಪೂರೈಸಲು ತಕ್ಷಣ ಕ್ರಮ ಕೈಕೊಳ್ಳುತ್ತದೆ ಎಂದು ನಮ್ಮ ಸಂಘವು ಭಾವಿಸುತ್ತದೆ ಎಂದು ಅಶೋಕಸ್ವಾಮಿ ಹೇರೂರ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಜೀವ ಉಳಿಸಲು ಸಹಾಯ ಮಾಡುವ ಹಾಗೂ ರೋಗಿಗಳ ಹಿತದೃಷ್ಟಿಯಿಂದ ಕಾನೂನಿನ ನಿಯಮಗಳಿಗೆ ಅನುಸಾರವಾಗಿ ಔಷಧ ವ್ಯಾಪಾರಿಗಳ ಮೂಲಕ ಈ ಔಷಧಗಳನ್ನು ಸರಬರಾಜು ಮಾಡಲು ತಕ್ಷಣವೇ ಸರಕಾರ ಕ್ರಮಕೈಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News