ಪ್ರಧಾನಿ ಮೋದಿ 7 ವರ್ಷಗಳಿಂದ ಕ್ವಾರಂಟೈನ್‍ನಲ್ಲಿ ಇದ್ದಾರೆ: ಶಾಸಕ ಎಚ್.ಪಿ.ಮಂಜುನಾಥ್ ವ್ಯಂಗ್ಯ

Update: 2021-05-15 18:00 GMT

ಮೈಸೂರು,ಮೇ.15:  ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷದಿಂದ ಜನರಿಂದ ದೂರ ಇದ್ದು ಕ್ವಾರಂಟೈನ್ ನಲ್ಲಿ ಇದ್ದು ಮಾದರಿಯಾಗಿದ್ದಾರೆ. ಹಾಗಾಗಿ ಅವರ ನಿಲುವನ್ನೇ ಅನುಸರಿಸಿ ಎಲ್ಲರೂ ಕ್ವಾರಂಟೈನ್‍ನಲ್ಲೇ ಇರಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಧಾನಿಯವರೇ  ಮಾದರಿ ಅಂತ ಬೊಬ್ಬೆ ಹೊಡೆಯುತ್ತಾರೆ. ಈ ನಡುವೆ ಕಳೆದ ಏಳು ವರ್ಷದಿಂದ ಮೋದಿ ಜನರಿಂದ ದೂರವಾಗಿ ಕ್ವಾರಂಟೈನ್ ನಲ್ಲೇ ಇದ್ದಾರೆ. ಹೀಗಾಗಿ ಮೋದಿ ನಿಲುವನ್ನೇ ಅನುಸರಿಸಿ ಮನೆಯಲ್ಲೇ ಇದ್ದು ಆರೋಗ್ಯ ಉಳಿಸಿಕೊಳ್ಳಿ ಎಂದು  ಹೇಳಿದರು.

ಟಾಸ್ಕ್ ಫೋರ್ಸ್ ಕಮಿಟಿ ಬಗ್ಗೆ ಮಾತನಾಡಿದ ಮಂಜುನಾಥ್, ಟಾಸ್ಕ್ ಫೋರ್ಸ್ ಕಮಿಟಿ ದಸರಾ ಸಮಿತಿ ಆಗಬಾರದು. ಉಪ ಸಮಿತಿಗಳೇ ಬೇರೆ, ಸ್ವಾಗತ ಸಮಿತಿಯೇ ಬೇರೆ. ಇಂತಹ ಯುದ್ದದ ಸಮಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಪ್ರತಿ ಪಕ್ಷಗಳು ಜಿಲ್ಲಾಡಳಿತದ ಕೈಜೋಡಿಸಲು ಸಿದ್ದವಾಗಿವೆ. ಹೀಗಾಗಿ ಟಾಸ್ಕ್ ಫೋರ್ಸ್ ಕಮಿಟಿ ರಚನೆಯಲ್ಲಿ ರಾಜಕೀಯ ಬೇಡ. ಎಲ್ಲ ಶಾಸಕರನ್ನು ಒಟ್ಟುಗೂಡಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. 

ನನ್ನ ಕ್ಷೇತ್ರದಲ್ಲಿ ಆರೋಗ್ಯ ರಕ್ಷಾ ಹಣದಿಂದ ಆಕ್ಸಿಜನ್ ಖರೀದಿ ಮಾಡುತ್ತಿದ್ಧೇವೆ. ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಸಮಸ್ಯೆ ಇದೆ. ಸರ್ಕಾರದ ನಿಲುವು ಮನೆಗೆ ಬೆಂಕಿ ಹಚ್ಚಿದ ಮೇಲೆ ಬಾವಿ ತೋಡಿದಂತಾಗಬಾರದು. ಸುಳ್ಳು ಹೇಳಿಕೆಗಳನ್ನ ನೀಡಿ ಮಾಧ್ಯಮಗಳನ್ನ ದುರ್ಬಳಕೆ ಮಾಡಿಕೊಳ್ಳಬೇಡಿ. ನ್ಯೂನ್ಯತೆ ಮುಚ್ಚಿ ಹಾಕಲು ವಿಚಾರ ಡೈವರ್ಟ್ ಮಾಡಲು ಹೊರಟಿದ್ದೀರಾ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News