ಕೋವಿಡ್‍ಗೆ ಬಲಿಯಾದ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಆಗ್ರಹ

Update: 2021-05-16 12:16 GMT

ಬೆಂಗಳೂರು, ಮೇ 16: ಕೋವಿಡ್-19 ಎರಡನೇ ಅಲೆಯ ಪರಿಣಾಮ ಖಾಸಗಿ ಅನುದಾನ ರಹಿತ ಶಾಲಾ ಬೋಧಕರು ಸೇರಿದಂತೆ ಸೋಂಕಿಗೆ ತುತ್ತಾಗಿರುವ ಶಾಲಾ ನೌಕರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕಳೆದ ಒಂದು ವರ್ಷದಿಂದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿದ್ದ 422 ನೌಕರರು ಕೋವಿಡ್ ಎರಡನೇ ಅಲೆಗೆ ಸಿಕ್ಕಿ ಅಸುನೀಗಿದ್ದಾರೆ. ಹಾಗೂ ಅನೇಕ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ನೆರವಿಗೆ ಸರಕಾರ ಧಾವಿಸಬೇಕೆಂದು ಹಲವು ದಿನಗಳಿಂದ ಮನವಿ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಲಕ್ಷಾಂತರ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೋವಿಡ್ ಪರಿಣಾಮ ಲಾಕ್‍ಡೌನ್ ಕೆಲಸವಿಲ್ಲದೆ ಇತರೆ ಕೂಲಿ ಕೆಲಸಗಳಲ್ಲಿ ತೊಡಗಿದ್ದರು. ಕಳೆದ ಜನವರಿಯಲ್ಲಿ ಪುನಃ ಶಾಲೆಗಳು ಪ್ರಾರಂಭವಾದಾಗ ಕೆಲವು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಕೋವಿಡ್ ಎರಡನೆ ಅಲೆ ಪರಿಣಾಮ ಲಾಕ್‍ಡೌನ್ ಆಗಿರುವುದರಿಂದ ಶಿಕ್ಷಕರು ಮತ್ತೊಮ್ಮೆ ನಿರುದ್ಯೋಗದ ಸಮಸ್ಯೆಗೆ ಸಿಲುಕಿದ್ದಾರೆಂದು ಅವರು ವಿಷಾದಿಸಿದ್ದಾರೆ.

ಕೋವಿಡ್ ಮೊದಲ ಲಾಕ್‍ಡೌನ್‍ನಿಂದಲೂ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ, ಸರಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹಾಗೂ ಖಾಸಗಿ ಶಾಲೆಗಳಿಗೆ ಬಾಕಿಯಿರುವ ಆರ್‍ಟಿಇ ಹಣವನ್ನಾದರು ಕೊಡಿ, ಆ ಹಣದಿಂದ ಶಿಕ್ಷಕರಿಗೆ ಆರ್ಥಿಕ ಸಹಾಯ ನೀಡುತ್ತೇವೆಂದು ಮನವಿ ಮಾಡಲಾಯಿತು, ಅದಕ್ಕೂ ಸರಕಾರದಿಂದ ಯಾವುದ ಸ್ಪಷ್ಟನೆ ಸಿಕ್ಕಿಲ್ಲವೆಂದು ಅವರು ಆರೋಪಿಸಿದ್ದಾರೆ.

ಕೋವಿಡ್‍ನಿಂದ ಮೃತಪಟ್ಟ ಶಿಕ್ಷಕರು: ಬೆಂಗಳೂರು ಗ್ರಾಮಾಂತರ-10, ವಿಜಯಪುರ-39, ಚಿತ್ರದುರ್ಗ-10, ಮೈಸೂರು-10, ತುಮಕೂರು-19, ಚಿಕ್ಕಮಗಳೂರು-9, ಬೆಳಗಾವಿ-14, ಚಾಮರಾಜನಗರ-1, ಉತ್ತರ ಕನ್ನಡ-3, ಹಾವೇರಿ-2, ಶಿವಮೊಗ್ಗ-4, ಬಳ್ಳಾರಿ-18, ರಾಯಚೂರು-6, ಕಲಬುರಗಿ-10, ಚಿಕ್ಕೋಡಿ-22, ಬೀದರ್-55, ಬೆಂಗಳೂರು ಉತ್ತರ-36, ಬೆಂಗಳೂರು ದಕ್ಷಿಣ-5 ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News