ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಕೋವಿಡ್ ಪರಿಸ್ಥಿತಿ ನಿಭಾವಣೆ ಕಷ್ಟವಿತ್ತು: ನಳಿನ್ ಕುಮಾರ್

Update: 2021-05-16 13:15 GMT

ಬೆಂಗಳೂರು, ಮೇ 16: `ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ನಿರ್ಣಯಗಳು ನೂರಕ್ಕೆ ನೂರು ಸರಿದಾರಿಯಲ್ಲಿದೆ. ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿಭಾವಣೆ ಕಷ್ಟವಿತ್ತು. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಕೇವಲ 2 ಏಮ್ಸ್ ಇದ್ದವು, ಮೋದಿ ಸರಕಾರ ಕೇವಲ 7 ವರ್ಷದಲ್ಲಿ 9 ಏಮ್ಸ್ ಸ್ಥಾಪಿಸಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೋವಿಡ್ ನಿಯಂತ್ರಣಕ್ಕಾಗಿ ಪಕ್ಷ ಹಾಗೂ ಸರಕಾರ ಒಂದಾಗಿ ಸೇವೆ ಸಲ್ಲಿಸುತ್ತಿದ್ದು, ಸೇವೆಯೇ ನಮ್ಮ ಪರಮ ಧ್ಯೇಯ. ಮಾತು ಕಡಿಮೆ, ಕೆಲಸ ಹೆಚ್ಚು ಮಾಡುವುದೇ ನಮ್ಮ ಗುರಿ. ನಮ್ಮ ನಿಯತ್ತು ನಿಷ್ಠೆಯಲ್ಲಿ ಕೊರತೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಜನರ ಪ್ರಾಣ ರಕ್ಷಣೆಯೇ ನಮ್ಮ ಪ್ರಥಮ ಆದ್ಯತೆ' ಎಂದು ತಿಳಿಸಿದ್ದಾರೆ.

ಕೋವಿಡ್ ಪರಿಹಾರ ಕಾರ್ಯದಲ್ಲಿ ಸರಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ. ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಗಳಲ್ಲಿ ವಾರ್ ರೂಮ್ ತೆರೆದಿದ್ದೇವೆ. ಇಲ್ಲಿಗೆ ಬರುವ ಕರೆಗಳನ್ನು ಜಿಲ್ಲಾಡಳಿತ, ಉಸ್ತುವಾರಿ ಸಚಿವರಿಗೆ ತಲುಪಿಸುವ ಕೆಲಸ ಸೇರಿದಂತೆ 13 ಅಂಶಗಳನ್ನೊಳಗೊಂಡ ಸೇವೆ ಮಾಡಲಾಗುತ್ತಿದೆ' ಎಂದು ಕಟೀಲ್ ತಿಳಿಸಿದ್ದಾರೆ.

ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್, ಜನರ ತೆರಿಗೆ ಹಣವನ್ನು ವಿವೇಚನೆಯಿಂದ ಬಳಸಿದ್ದರೆ ಕೊರೋನ ನಿಯಂತ್ರಿಸಲು ಕಷ್ಟವಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೂರದೃಷ್ಟಿ ಇರಲಿಲ್ಲ. ದೇಶವನ್ನು ಲೂಟಿ ಮಾಡುವ ಯೋಚನೆ ಬಿಟ್ಟು ಮತ್ಯಾವ ಯೋಚನೆಯೂ ಇರಲಿಲ್ಲ' ಎಂದು ನಳಿನ್ ಕುಮಾರ್ ಕಟೀಲು ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News