ಕೋವಿಡ್ ನಿಯಂತ್ರಣಕ್ಕೆ ಬರದಿದ್ದರೂ ಸರಕಾರ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ: ಎಸ್.ಆರ್.ಪಾಟೀಲ್

Update: 2021-05-16 15:08 GMT

ಬೆಂಗಳೂರು, ಮೇ 16: ಕೊರೋನ ನಿಯಂತ್ರಣಕ್ಕೆ ಬಾರದಿದ್ದರೂ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಎಂದು ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪ ಮಾಡಿದ್ದಾರೆ.

ಈ ಸಂಬಂಧ ರವಿವಾರ ಟ್ವೀಟ್ ಮಾಡಿರುವ ಅವರು, ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯಾದ್ಯಂತ 5,538 ಜನರು ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನರು ಕೊರೋನ ಬಲಿಯಾಗುತ್ತಿದ್ದಾರೆ. ಆದರೂ ಸರಕಾರ ಕೊರೋನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಾಗಿದೆ. ಈ ಸುಳ್ಳಿಗೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು ಹೇಳುತ್ತಿದ್ದಾರೆ. ಹಾಗಾದರೆ 15 ದಿನದಲ್ಲಿ 5,538 ಜನ ಸತ್ತಿದ್ದು ಹೇಗೆ? ಆಕ್ಸಿಜನ್ ತೀವ್ರ ಅಭಾವದಿಂದಲೇ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಈ ಸರಕಾರ ಕೆಲಸ ಮಾಡುವ ಬದಲು ಹೆಸರು ಮಾಡಲು ಯತ್ನಿಸುತ್ತಿದೆ. ಇದು ಆರೋಗ್ಯ ಇಲಾಖೆ ಕೊಟ್ಟಿರುವ ಲೆಕ್ಕ. ಇನ್ನು ಸರಕಾರ ಮುಚ್ಚಿಟ್ಟಿರೋ ಸಾವುಗಳು ಮತ್ತು ಬೆಡ್ ಇಲ್ಲದೇ ರಸ್ತೆಗಳಲ್ಲೇ ಪ್ರಾಣ ಬಿಟ್ಟವರು, ಮನೆಗಳಲ್ಲೇ ಜೀವ ಬಿಟ್ಟವರ ಸಂಖ್ಯೆ ಇನ್ನೂ ದೊಡ್ದದಿದೆ. ಆದರೂ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ರಾಜ್ಯ ಬಿಜೆಪಿ ಸರಕಾರ ಕೊರೋನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ದೂರಿದ್ದಾರೆ.

ರಾಜ್ಯ ಸರಕಾರ ಈ ಮೊದಲು ದಿನಕ್ಕೆ ಸರಾಸರಿ 1.80 ಲಕ್ಷ ಕೊರೋನ ಪರೀಕ್ಷೆಗಳನ್ನು ಮಾಡುತ್ತಿತ್ತು. ಆದರೆ, ಈಗ ಈ ಸಂಖ್ಯೆ 1.20 ಲಕ್ಷಕ್ಕೆ ಬಂದು ನಿಂತಿದೆ. 60 ಸಾವಿರದಷ್ಟು ಪರೀಕ್ಷೆಗಳನ್ನು ಕಡಿಮೆ ಮಾಡಿರುವುದಕ್ಕೆ ಕಾರಣ ಏನು? ಕಡಿಮೆ ಪ್ರಕರಣಗಳನ್ನು ತೋರಿಸಲು ಈ ಸರಕಾರ ಪರೀಕ್ಷೆ ಕಡಿಮೆ ಮಾಡುವ ಅಡ್ಡ ದಾರಿಗಿಳಿದಿದೆ. ಕೊರೋನ ನಿರ್ವಹಣೆಯ ವಿಚಾರದಲ್ಲಿ ಬಿಎಸ್‍ವೈ ಅವರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪ ಮಾಡಿದರು.

ಪ್ರಕರಣಗಳು ಹೆಚ್ಚಿದರೂ ಚಿಂತೆಯಿಲ್ಲ, ಪರೀಕ್ಷೆ ಮಾಡಿ ಪಾಸಿಟಿವ್ ಬಂದವರಿಗೆ ಔಷಧ ಕೊಡುವ ಕೆಲಸ ಮಾಡಿ. ಕೇಸ್‍ಗಳನ್ನು ಮುಚ್ಚಿಟ್ಟರೆ ಅದರ ಪರಿಣಾಮ ಭೀಕರವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News