'ಕಪ್ಪು ಶಿಲೀಂದ್ರ' ಔಷಧ ಕೊರತೆ ದುರಂತದ ಮುನ್ಸೂಚನೆ: ಕುಮಾರಸ್ವಾಮಿ ಎಚ್ಚರಿಕೆ

Update: 2021-05-16 17:04 GMT

ಬೆಂಗಳೂರು, ಮೇ 16: `ಕಪ್ಪು ಶಿಲೀಂಧ್ರದ ಸಮಸ್ಯೆಯು ಪಿಡುಗಾಗಿ, ಮಹಾಮಾರಿಯಾಗಿ ಕಾಡುವ ಆತಂಕವನ್ನು ಜನರ ಮುಂದೊಡ್ಡಿದೆ. ಅದರ ಚಿಕಿತ್ಸೆಗೆ ಅಗತ್ಯವಿರುವ ಔಷಧ ಕೊರತೆಯನ್ನು ಕರ್ನಾಟಕ ಎದುರಿಸುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಔಷಧದ 1,050 ವಯಿಲ್ ಗಳು (ಶೀಶೆ) ಮಾತ್ರ ಇವೆ ಎಂಬ ಆಘಾತಕಾರಿ ಅಂಶವು ಭಯ ಸೃಷ್ಟಿಸಿದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕಪ್ಪು ಶಿಲೀಂಧ್ರ ಸಮಸ್ಯೆ ಮಹಾರಾಷ್ಟ್ರದಲ್ಲಿ ಹಲವು ತಿಂಗಳಿಗೆ ಮೊದಲೇ ಕಾಣಿಸಿಕೊಂಡಿತ್ತು. ಸಮಸ್ಯೆ ಇಲ್ಲಿಯೂ ಕಾಣಿಸಿಕೊಳ್ಳುವ ಅಪಾಯದ ಬಗ್ಗೆ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಸಮಸ್ಯೆ ದೊಡ್ಡದಾಗುವ ಎಚ್ಚರಿಕೆಗಳಿದ್ದರೂ ಔಷಧದ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಔಷಧ ಸಂಗ್ರಹ ಈ ಹೊತ್ತಿನ ಅಗತ್ಯ' ಎಂದು ಸಲಹೆ ನೀಡಿದ್ದಾರೆ.

ಕಪ್ಪು ಶಿಲೀಂದ್ರ ನಿರೋಧಕ ಔಷಧಿಯ 20 ಸಾವಿರ ವಯಲ್‍ಗಳನ್ನು ಶೀಘ್ರವೇ ಪೂರೈಕೆ ಮಾಡುವಂತೆ ರಾಜ್ಯ ಔಷಧ ಉಗ್ರಾಣ ಕೇಂದ್ರವು ಕೇಂದ್ರ ಸರಕಾರವನ್ನು ಕೋರಿದೆ. ರಾಜ್ಯ ಸರಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

`ಕಪ್ಪು ಶಿಲೀಂಧ್ರ ಸಮಸ್ಯೆ ರಾಜ್ಯದಲ್ಲಿ ಈಗಾಗಲೇ ಗಂಭೀರ ಸ್ವರೂಪದಲ್ಲೇ ಕಾಣಿಸಿಕೊಂಡಿದೆ. ಹಲವರು ಬಲಿಯಾಗಿದ್ದಾರೆ. ಕೋವಿಡ್‍ನಿಂದ ಗುಣವಾಗುವ 400 ಮಂದಿ ಪ್ರತಿ ವಾರ ಈ ಸಮಸ್ಯೆಗೆ ಸಿಲುಕುವ ಸಾಧ್ಯತೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ತಿಳಿಸಿದೆ. ಹೀಗಿರುವಾಗ ಎದುರಾಗಿರುವ ಔಷಧ ಕೊರತೆ ದುರಂತದ ಮುನ್ಸೂಚನೆ ನೀಡುತ್ತಿದೆ' ಎಂದು ಕುಮಾರಸ್ವಾಮಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News