ಖಾಸಗಿ ಸಹಭಾಗಿತ್ವದಲ್ಲಿ ಎಲ್ಲ ಜಿಲ್ಲೆಗಳಿಗೂ ಆಕ್ಸಿಜನ್ ಬಸ್ ಒದಗಿಸಲು ಸಿದ್ಧ: ಡಿಸಿಎಂ ಸವದಿ

Update: 2021-05-16 17:09 GMT

ಬೆಂಗಳೂರು, ಮೇ 16: ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳು, ಆಸ್ಪತ್ರೆಗಳು ಪ್ರಾಯೋಜಕತ್ವ(ಸ್ಪಾನ್ಸರ್) ನೀಡಿದರೆ ಎಲ್ಲ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್ ಸೌಲಭ್ಯ ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಒಂದು  ಬಸ್ಸಿನಲ್ಲಿ ಆರರಿಂದ ಹತ್ತು ಮಂದಿಗೆ ಆಕ್ಸಿಜನ್ ಪೂರೈಕೆ ಮಾಡುವುದು ಸಾಧ್ಯ. ಪ್ರಸ್ತುತ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಜಾಸ್ತಿಯಾಗಿರುವುದರಿಂದ ಸಹಜವಾಗಿಯೇ ಆಕ್ಸಿಜನ್  ಪೂರೈಕೆ ಕಷ್ಟ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಆದರೆ ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಅಳವಡಿಸಿರುವ ಬಸ್ಸುಗಳನ್ನು ಆಸ್ಪತ್ರೆಗಳ ಬಳಿ ನಿಲ್ಲಿಸಿದರೆ ರೋಗಿಗಳಿಗೆ ತುರ್ತಾಗಿ ಬಂದು ಅಲ್ಲಿ ವಿಶ್ರಮಿಸಲು ಮತ್ತು ಆಕ್ಸಿಜನ್ ಪಡೆದು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂಥಾ ಪ್ರಯೋಗಗಳು ಈಗಾಗಲೇ ಬೆಂಗಳೂರಿನಲ್ಲಿ ಯಶಸ್ಸು ಕಂಡಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಒಂದು ವೇಳೆ ಸ್ವಯಂಸೇವಾ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಗಳೊಂದಿಗೆ ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಒದಗಿಸಿಕೊಟ್ಟರೆ ಉಚಿತವಾಗಿ ಬಸ್ಸುಗಳನ್ನು ಮತ್ತು ಚಾಲಕರನ್ನು ನಮ್ಮ ಸಾರಿಗೆ ನಿಗಮಗಳಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಆಕ್ಸಿಜನ್ ಬಸ್ಸುಗಳನ್ನು ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸೂಚಿಸಿರುವುದಾಗಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಬಗ್ಗೆ ಅಗತ್ಯವಿದ್ದವರು ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೈದರಾಬಾದಿನ ಸೇವಾ ಸಂಸ್ಥೆಯೊಂದು ನಮ್ಮ ಸಾರಿಗೆ ನಿಗಮಗಳ ಸಹಯೋಗದಲ್ಲಿ ವ್ಯಾಪಕವಾಗಿ ಆಕ್ಸಿಜನ್ ಬಸ್ಸುಗಳ ಸೇವೆಯನ್ನು ಪ್ರಾರಂಭಿಸಲು ಮುಂದೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಈ ಜಂಟಿ ಪ್ರಯತ್ನ ಕೈಗೂಡಿದರೆ ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಿನ ಮಂದಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News