ಕೊರೋನ ಸೋಂಕಿತರಿಗೆ ಉಚಿತ ಆಟೋ ಸೇವೆ ಒದಗಿಸುತ್ತಿರುವ ಕಲಬುರಗಿ ವ್ಯಕ್ತಿ

Update: 2021-05-16 17:46 GMT

ಕಲಬುರಗಿ, ಮೇ 16: ರಾಜ್ಯದಲ್ಲಿ ಕೊರೋನ ಸೋಂಕು ದಿನಂಪ್ರತಿ ಹೆಚ್ಚಳವಾಗುತ್ತಿದ್ದು, ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿರುವ ಹೊತ್ತಿನಲ್ಲಿ ಕಲಬುರಗಿಯ ವ್ಯಕ್ತಿಯೊಬ್ಬರು ತಾವೇ ಉಚಿತವಾಗಿ ಆಟೋ ರಿಕ್ಷಾ ಓಡಿಸಿ, ಕೋವಿಡ್ ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಉಚಿತವಾಗಿ ಕರೆದುಕೊಂಡು ಹೋಗಿ ಸೇವೆ ನೀಡುತ್ತಿದ್ದಾರೆ.

ಆಕಾಶ್ ದೇನೂರು ಎಂಬ ವ್ಯಕ್ತಿ ಸೋಂಕಿತ ವ್ಯಕ್ತಿಗಳಿಗೆ ಉಚಿತವಾಗಿ ಆಟೋ ಸೇವೆ ಒದಗಿಸುತ್ತಿದ್ದಾರೆ. ಸೇನೆ ಸೇರಿಕೊಂಡು ಗಡಿ ಕಾಯುತ್ತಾ ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಆಸೆಯನ್ನು ಆಕಾಶ್ ಕಂಡಿದ್ದರು. ಆ ಕನಸು ನನಸಾಗದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜನರಿಗೆ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆಂದು ಆಕಾಶ್ ಹೇಳಿದ್ದಾರೆ.

ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ವ್ಯವಸ್ಥೆಗಳ ಕೊರತೆ ಎದುರಾಗಿದೆ. ಆ್ಯಂಬುಲೆನ್ಸ್ ಆಗಲೀ ಅಥವಾ ಆಟೋಗಳಾಗಲಿ ಎಲ್ಲೆಲ್ಲೆಯೂ ಸಮಸ್ಯೆಯಾಗುತ್ತಿದೆ. ಹೀಗಾಗಿ ನಾನು ಉಚಿತ ಸೇವೆ ಮಾಡಲು ನಿರ್ಧರಿಸಿದೆ. ಕಳೆದ 4 ವರ್ಷಗಳಿಂದ ನಾನು ಆಟೋ ಓಡಿಸುತ್ತಿದ್ದೇನೆ. ಸೇನೆಗೆ ಸೇರುವ ಆಸೆಯಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದೀಗ ಜನರ ಸೇವೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಸೇವೆ ಮಾಡುತ್ತಿದ್ದೇನೆ. ಅಗತ್ಯ ಇರುವವರು ಫೋನ್ ಮಾಡಿ ಮಾಹಿತಿ ನೀಡಿದರೆ, ಅವರ ಮನೆಗೇ ತೆರಳಿ ಆಸ್ಪತ್ರೆಗೆ ಡ್ರಾಪ್ ಮಾಡುತ್ತೇನೆ. ಕೊರೋನ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News