ಕೋಲಾರ: ಹಳೆ ಆಸ್ಪತ್ರೆ ಕಟ್ಟಡವನ್ನು 15 ದಿನಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿದ ಬಿಜೆಪಿ, ಆರೆಸ್ಸೆಸ್‌

Update: 2021-05-17 07:59 GMT

ಕೋಲಾರ: ಕೋಲಾರದಲ್ಲಿನ ಬ್ರಿಟಿಷರ ಕಾಲದ 140 ವರ್ಷ ಹಳೆಯ ಆದರೆ ಕಳೆದೆರಡು ದಶಕಗಳಿಂದ ನಿರುಪಯೋಗಿಯಾಗಿದ್ದ  ಆಸ್ಪತ್ರೆಗೆ  ಸುಮಾರು 15 ದಿನಗಳ ಅವಧಿಯಲ್ಲಿ  300 ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಅವಿರತ ಶ್ರಮದಿಂದ  ಹೊಸ ರೂಪ ನೀಡಿ  ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ. ಇವರ ಶ್ರಮದ ಫಲವಾಗಿ ಕೋಲಾರದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಆಸ್ಪತ್ರೆ ಇಂದಿನಿಂದ ಕೋವಿಡ್ ರೋಗಿಗಳ ಸೇವೆಗೆ ಸಿದ್ಧವಾಗಿದೆ ಎಂದು theprint.in ವರದಿ ಮಾಡಿದೆ.

ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವವರು ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ. ಕಳೆದ ಹಲವಾರು ದಿನಗಳಿಂದ ಅವರು ಇಲ್ಲಿಯೇ ಠಿಕಾಣಿ ಹೂಡಿ ನಡೆಯುತ್ತಿದ್ದ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದರು. 2001ರ ತನಕ ಕೋಲಾರ ಚಿನ್ನದ ಗಣಿಯ ಕಾರ್ಮಿಕರು ಮತ್ತವರ ಕುಟುಂಬಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದ  ಈ 800 ಹಾಸಿಗೆಗಳ ಆಸ್ಪತ್ರೆ ನಂತರ  ಸ್ಥಗಿತಗೊಂಡಿತ್ತು.

ಕೋಲಾರದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದುದರಿಂದ ಬಿಜೆಪಿಯ ಕೆಜಿಎಫ್ ಘಟಕದ ಅಧ್ಯಕ್ಷ ಕಮಲನಾಥನ್ ಅವರ ಸಲಹೆಯಂತೆ ಈ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಈಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.

ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಶ್ರಮದ ಫಲವಾಗಿ ಈ ಕೋವಿಡ್ ಕೇರ್ ಕೇಂದ್ರ 300 ಹಾಸಿಗೆಗಳೊಂದಿಗೆ ಸಜ್ಜಾಗುತ್ತಿದೆ, ಸೋಮವಾರ 220 ರೋಗಿಗಳಿಗೆ ಈ ಕೇಂದ್ರ ತೆರೆದುಕೊಳ್ಳಲಿದೆ ಎಂದು ಮುನಿಸ್ವಾಮಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥನಾರಾಯಣ ಅವರ ಕೊಡುಗೆಯಾಗಿ ಈ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಕಾನ್ಸಂಟ್ರೇಟರುಗಳು ಕೂಡ ಲಭ್ಯವಾಗಲಿದೆ. ಇಲ್ಲಿ ಸೇವೆ ಸಲ್ಲಿಸಲು ವೈದ್ಯರನ್ನು ಹಾಗೂ ದಾದಿಯರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಎಕ್ಸ್-ರೇ, ಲ್ಯಾಬ್ ಹೀಗೆ ಎಲ್ಲಾ ಸೇವೆಗಳನ್ನೂ ಇಲ್ಲಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೋಲಾರದಲ್ಲಿ  5,102 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ಜಿಲ್ಲೆಯಲ್ಲಿ ಇಲ್ಲಿ ತನಕ ಒಟ್ಟು 27,832 ಕೋವಿಡ್ ಪ್ರಕರಣಗಳು ಹಾಗೂ 256 ಸಾವುಗಳು ದಾಖಲಾಗಿವೆ.

ಬಿಜಿಎಂಎಲ್ ಆಸ್ಪತ್ರೆಯನ್ನು 1880ರಲ್ಲಿ ಡಾ ಟಿ ಜೆ  ಒ'ಡೊನ್ನೆಲ್ಲ್ ಮತ್ತವರ ಸಹೋದರ ಜೆ ಡಿ ಒ'ಡೊನ್ನೆಲ್ಲ್ ಸ್ಥಾಪಿಸಿದ್ದರಲ್ಲದೆ ಆ ಕಾಲದಲ್ಲಿ ಇದು  ಏಷ್ಯಾದ ಅತಿ ದೊಡ್ಡ ಆಸ್ಪತ್ರೆಯೆಂದು ಗುರುತಿಸಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News