×
Ad

ಯುವಕನ ಮೇಲೆ ಪಿಎಸ್ಸೈಯಿಂದ ದೌರ್ಜನ್ಯದ ಆರೋಪ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು

Update: 2021-05-17 23:27 IST

ಮೂಡಿಗೆರೆ, ಮೇ 17: ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡು ಆಕೆಯನ್ನು ಬೇರೆಡೆ ಕರೆದೊಯ್ದಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ ಗೋಣಿಬೀಡು ಠಾಣೆಯ ಪಿಎಸ್ಸೈ ತನ್ನ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕಿರುಗುಂದ ಗ್ರಾಪಂ ಕಚೇರಿಯ ದಿನಗೂಲಿ ನೌಕರ ಕೆ.ಎಲ್.ಪುನಿತ್(22)ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮೇ 10ರಂದು ಬೆಳಗ್ಗೆ 10ಕ್ಕೆ ಕಿರುಗುಂದ ಗ್ರಾಮದಲ್ಲಿರುವ ತನ್ನ ಮನೆಗೆ ಅದೇ ಗ್ರಾಮದ ಕೆಲವರು ಬಂದು ಮಹಿಳೆಯ ಬಗ್ಗೆ ವಿಚಾರಿಸಿ, ಮೇಲೆ ಹಲ್ಲೆ ನಡೆಸಲು ಮುಂದಾದರು. ತಾನು ಪೋಲೀಸ್ ಹೆಲ್ಪ್‍ಲೈನ್ 112ಕ್ಕೆ ಕರೆ ಮಾಡಿದ್ದೆ. ಆಗ ಸ್ಥಳಕ್ಕೆ ಬಂದ ಗೋಣಿಬೀಡು ಠಾಣೆಯ ಪಿಎಸ್ಸೈ ಅರ್ಜುನ್ ತನ್ನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿ ಪೋಲೀಸ್ ವಾಹನಕ್ಕೆ ಹತ್ತಿಸಿಕೊಂಡು ಠಾಣೆಗೆ ಕರೆದೊಯ್ದರು. ಠಾಣೆಯ ಮಹಡಿಯ ಕೊಠಡಿಯೊಳಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಪುನಿತ್ ಆರೋಪಿಸಿದ್ದಾರೆ.

ನಾನು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೇನೆ, ಆಕೆಯನ್ನು ಕರೆದೊಯ್ದು ಬೇರೆಡೆ ಇರಿಸಿದ್ದೇನೆ ಎಂದು ಒಪ್ಪಿಕೋ ಎನ್ನುತ್ತಾ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಬಳಿಕ ರಾತ್ರಿ 10ಕ್ಕೆ ಪಿಎಸ್ಸೈ ಕೊಠಡಿಗೆ ಕರೆದು ಹಲ್ಲೆ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ಹೇಳಿ ನನ್ನನ್ನು ಠಾಣೆಯಿಂದ ಮನೆಗೆ ಕಳುಹಿಸಿದ್ದಾರೆ ಎಂದು ಯುವಕ ದೂರಿದ್ದಾರೆ.

ನಾನು ಗ್ರಾ.ಪಂ.ನಲ್ಲಿ ದಿನಗೂಲಿ ನೌಕರನಾಗಿ ದುಡಿದು ಜೀವನ ನಡೆಸುತ್ತಿದ್ದೇನೆ. ಯಾವುದೋ ಮಹಿಳೆಯ ವಿಚಾರಕ್ಕೆ ಸಂಬಂಧಿಸಿ ನನ್ನ ಮೇಲೆ ತೀವ್ರ ಹಲ್ಲೆ ನಡೆಸಿರುವ ಕಾರಣದಿಂದ ಮೈಕೆ ಮೂಳೆಗಳು ತೀವ್ರ ಹಾನಿಗೊಳಗಾಗಿದೆ. ಇನ್ನು ಮುಂದೆ ನನಗೆ ಕೆಲಸಮಾಡಲು ಸಾಧ್ಯವೇ ಇಲ್ಲ. ನನ್ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿರುವ ಪಿಎಸ್ಸೈ ಅರ್ಜುನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಪಶ್ಚಿಮ ವಲಯ ಐಜಿಪಿ ಹಾಗೂ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದೇನೆ ಎಂದು ಕೆ.ಎಲ್.ಪುನಿತ್ ತಿಳಿಸಿದ್ದಾರೆ.

ಕಿರುಗುಂದ ಗ್ರಾಮದ ಕೆ.ಎಲ್.ಪುನೀತ್ ಎಂಬ ಯುವಕ ಗೋಣೀಬೀಡು ಪಿಎಸ್ಸೈ ಅರ್ಜುನ್ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಲು ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ. ಅವರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
-  ಎಂ.ಎಚ್.ಅಕ್ಷಯ್, ಎಸ್ಪಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News