ಕರ್ಫ್ಯೂ ವಿಸ್ತರಣೆಯೊಂದೇ ಪರಿಹಾರವಲ್ಲ

Update: 2021-05-18 07:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಇತರ ನಗರಗಳ ನಂತರ ಕೊರೋನ ವೈರಾಣು ಗ್ರಾಮೀಣ ಪ್ರದೇಶಗಳಲ್ಲೂ ಅನಾಹುತ ಉಂಟು ಮಾಡುವ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸರಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿ ಹಳ್ಳಿಗಾಡಿನಲ್ಲಿ ಕಟ್ಟೆಚ್ಚರ ವಹಿಸಲು ತೀರ್ಮಾನಿಸಿದೆ. ಹಾಲಿ ಮಾರ್ಗಸೂಚಿಯಂತೆ ಈ ತಿಂಗಳ 24ನೇ ತಾರೀಕಿನವರೆಗೆ ಹೇರಲಾಗಿದ್ದ ಬಿಗಿಯಾದ ಕರ್ಫ್ಯೂವನ್ನು ಮೇ ಕೊನೆಯವರೆಗೆ ವಿಸ್ತರಿಸುವುದು ಬಹುತೇಕ ಖಚಿತವಾಗಿದೆ. ಕರ್ಫ್ಯೂವಿನಿಂದ ವ್ಯಾಪಾರ ವಹಿವಾಟು ನಿಂತು ಹೋಗಿ ಸಂಪನ್ಮೂಲಗಳ ಸಂಗ್ರಹಕ್ಕೆ ಹಿನ್ನಡೆಯಾಗುತ್ತಿದ್ದರೂ ಜನರ ಜೀವ ರಕ್ಷಣೆಗಾಗಿ ಇದು ಅನಿವಾರ್ಯವಾಗಿದೆ. ಆದರೆ ಬರೀ ಕರ್ಫ್ಯೂ ವಿಸ್ತರಣೆಯಿಂದ ವ್ಯಾಪಿಸುತ್ತಿರುವ ಕೋವಿಡ್ ಸೋಂಕನ್ನು ನಿಭಾಯಿಸಲು ಸಾಧ್ಯವಿಲ್ಲ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ದಿಢೀರನೆ ಹೇರುವ ಲಾಕ್‌ಡೌನ್‌ಗಳಿಂದ ಜನಸಾಮಾನ್ಯರ ದುಡಿಮೆ ನಿಂತು ಹೋಗಿ ಜನ ಉಪವಾಸದಿಂದ ನರಳಬೇಕಾಗುತ್ತದೆ.

 ಅತ್ಯಾಧುನಿಕ ಆಸ್ಪತ್ರೆಗಳನ್ನು ಹೊಂದಿರುವ ಬೆಂಗಳೂರು, ದಿಲ್ಲಿ, ಮುಂಬೈಯಂತಹ ನಗರಗಳೇ ಒಮ್ಮೆಲೇ ಅಪ್ಪಳಿಸಿದ ಕೊರೋನ ಎರಡನೇ ಅಲೆಗೆ ತತ್ತರಿಸಿ ಹೋದವು.ಇದರ ಬಗ್ಗೆ ಮುನ್ನೆಚ್ಚರಿಕೆ ಇದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದೂ ಸುಳ್ಳಲ್ಲ. ಮಹಾನಗರಗಳ ಪರಿಸ್ಥಿತಿ ಹೀಗಾದರೆ ನಗರಗಳಿಂದ ದೂರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಟ್ಟರೆ ಇನ್ಯಾವ ವೈದ್ಯಕೀಯ ಸೌಕರ್ಯಗಳು ಇಲ್ಲದಿರುವ ಹಳ್ಳಿಗಳಲ್ಲಿ ಈ ಸೋಂಕು ಹರಡಿದರೆ ನಿಯಂತ್ರಿಸುವುದು ತುಂಬಾ ಕಷ್ಟದ ಕೆಲಸ.
ಬೆಂಗಳೂರು ಬಿಟ್ಟರೆ ಇತರ ಜಿಲ್ಲೆಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಸಜ್ಜಿತ ವಾಗಿಲ್ಲ. ಕೆಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರಕಾರಿ ಆಸ್ಪತ್ರೆಗಳಿದ್ದರೂ ಅವುಗಳು ಸುಸಜ್ಜಿತವಾಗಿಲ್ಲ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹಿಂದುಳಿದ ಉತ್ತರ ಕರ್ನಾಟಕ ಮತ್ತು ಇತರ ಜಿಲ್ಲೆಗಳಲ್ಲಿ ಜೀವರಕ್ಷಕ ವೆಂಟಿಲೇಟರ್‌ಗಳಿದ್ದರೂ ಅವುಗಳನ್ನು ಬಳಸುವ ಪರಿಣಿತ ವೈದ್ಯಕೀಯ ಸಿಬ್ಬಂದಿಯ ಕೊರತೆ ಉಂಟಾಗಿರುವುದರಿಂದ ಈ ವೆಂಟಿಲೇಟರ್‌ಗಳು ಧೂಳು ತಿನ್ನುತ್ತಾ ಬಿದ್ದಿವೆ. ರಾಜ್ಯದಲ್ಲಿ 300 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಬಳಸಲ್ಪಡದೆ ಗೋದಾಮು ಸೇರಿವೆ. ಬೆಡ್, ಆಮ್ಲಜನಕ, ಔಷಧಿ ಜೊತೆಗೆ ಇವುಗಳನ್ನೂ ಸೇವೆಗೆ ಅಣಿಗೊಳಿಸಬೇಕಾಗಿದೆ.

ಮಹಾರಾಷ್ಟ್ರದಂತಹ ರಾಜ್ಯದಲ್ಲಿ ಕೂಡ ಮುಂಬೈ, ಪುಣೆ ಸೇರಿದಂತೆ ಹಲವು ನಗರಗಳಲ್ಲಿ ಆರಂಭದಲ್ಲಿ ವ್ಯಾಪಿಸಿದ್ದ ಕೊರೋನ ನಂತರ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿ ಸಾವು, ನೋವಿನ ಪ್ರಮಾಣ ಜಾಸ್ತಿಯಾಯಿತು. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಉಂಟಾಗಿದೆ.ಇತ್ತೀಚೆಗೆ ದಾಖಲಾದ 41,644 ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 13,402 ಪ್ರಕರಣಗಳು ದಾಖಲಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ 28 ಸಾವಿರ ಪ್ರಕರಣಗಳು ದಾಖಲಾಗಿ 346 ಸಾವುಗಳು ಸಂಭವಿಸಿವೆ.

ಸರಕಾರವೇನೋ ಸೋಂಕಿತರನ್ನು ಆಸ್ಪತ್ರೆಗೆ ಸೇರುವುದು ಬೇಡ, ಮನೆಯಲ್ಲಿ ಪ್ರತ್ಯೇಕ ವಾಗಿದ್ದು ಆರೈಕೆ ಮಾಡಿಕೊಳ್ಳಿರಿ ಎಂದು ಹೇಳುತ್ತಿದೆ. ಆದರೆ ಹಳ್ಳಿಗಳಲ್ಲಿ ನಾಲ್ಕಾರು ಸಿರಿವಂತರ ಮನೆಗಳನ್ನು ಬಿಟ್ಟರೆ ಬಡ ಮತ್ತು ಕೆಳ ಮಧ್ಯಮವರ್ಗದವರ ಮನೆಗಳು ಅತ್ಯಂತ ಚಿಕ್ಕ ಮನೆಗಳಾಗಿರುತ್ತವೆ. ಒಂದು ವರಾಂಡದಲ್ಲಿ ಮನೆ ಮಂದಿಯೆಲ್ಲ ವಾಸಿಸುತ್ತಾರೆ. ಊಟ, ವಿಶ್ರಾಂತಿ, ನಿದ್ರೆ ಎಲ್ಲವೂ ಆ ಪುಟ್ಟ ಮನೆಯಲ್ಲೇ ಅಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಸ್ಪಷ್ಟವಾದ ಮಾರ್ಗಸೂಚಿಯನ್ನು ಸರಕಾರ ನಿಗದಿಪಡಿಸಬೇಕು. ಕೋವಿಡ್ ಸೋಂಕಿಗೆ ಒಳಗಾದವರ ವಾಸಕ್ಕಾಗಿ ಪ್ರತ್ಯೇಕ ಏರ್ಪಾಡು ಮಾಡಬೇಕು.

ಹಳ್ಳಿಗಾಡಿನಲ್ಲಿ ಮಾಸ್ಕ್ ಧರಿಸುವವರ ಸಂಖ್ಯೆ ತುಂಬಾ ಕಡಿಮೆ. ಸ್ವಚ್ಛತೆ ಅಭಾವವೂ ಎದ್ದು ಕಾಣುತ್ತದೆ. ಸರಕಾರವೇನೋ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಹೇಳಿ ಕೊಂಡಿದೆ. ಆದರೆ ಈಗಾಗಲೇ ಸೋಂಕು ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿಯಾಗಿದೆ. ಕಾರಣ ಕೋವಿಡ್ ಎದುರಿಸಲು ಯುದ್ಧೋಪಾದಿಯ ಕಾರ್ಯಾಚರಣೆ ಅಗತ್ಯವಿದೆ. ತುರ್ತಾಗಿ ಹಳ್ಳಿಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸಬೇಕು.ಸೋಂಕಿಗೊಳಗಾದವರಿಗೆ ಸಕಾಲದಲ್ಲಿ ಔಷಧಿ ಕಿಟ್ ನೀಡಬೇಕು. ಪ್ರತಿ ಜಿಲ್ಲೆಗೆ ನೇಮಿಸಲ್ಪಟ್ಟ ಉಸ್ತುವಾರಿ ಸಚಿವರು ಅಲ್ಲೇ ತಂಗಿ ಕೆಲಸ ಕಾರ್ಯಗಳು ಚುರುಕಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಾಲೆ, ಸಮುದಾಯ ಭವನ, ಕಲ್ಯಾಣ ಮಂಟಪ, ಪಂಚಾಯತ್ ಕಟ್ಟಡಗಳು ಹಾಗೂ ಎಲ್ಲಿ ಸಾಧ್ಯವಾಗುವುದೋ ಅಲ್ಲೆಲ್ಲ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಬೇಕು. ಈ ಸಂದರ್ಭದಲ್ಲಿ ಕೊಂಚ ನಿರ್ಲಕ್ಷ ತಾಳಿದರೂ ಭಾರೀ ಪ್ರಮಾಣದ ಸಾವು, ನೋವುಗಳಾಗುವ ಅಪಾಯವಿದೆ. ಏನೇ ದುರಂತ ಸಂಭವಿಸಿದರೂ ಆಯಾ ಜಿಲ್ಲೆಗಳ ಜಿಲ್ಲಾಡಳಿತ ಮಾತ್ರವಲ್ಲ ಉಸ್ತುವಾರಿ ಮಂತ್ರಿಗಳನ್ನು ಉತ್ತರದಾಯಿಯಾಗುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಕರ್ನಾಟಕ ಈ ವಿಪತ್ತಿನಿಂದ ಪಾರಾಗಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ಬರೀ ಕರ್ಫ್ಯೂ ಮುಂದುವರಿಸಿದರೆ ಸಾಲದು. ಕೇರಳ ಮತ್ತು ಇತರ ರಾಜ್ಯಗಳ ಮಾದರಿಯಲ್ಲಿ ಬಡವರಿಗಾಗಿ, ಸಂತ್ರಸ್ತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ದುಡಿಮೆಯಿಲ್ಲದೆ ಕಂಗಾಲಾದ ಶ್ರಮಜೀವಿಗಳ ಖಾತೆಗೆ ತಲಾ ಹತ್ತು ಸಾವಿರ ರೂಪಾಯಿಗಳನ್ನು ಹಾಕಬೇಕು. ಕಡು ಬಡವರ ಮನೆಗಳಿಗೆ ಎರಡು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಒದಗಿಸುವುದು ಅಗತ್ಯವಾಗಿದೆ. ಲಾಕ್‌ಡೌನ್ ಘೋಷಣೆ ಮಾಡುವ ಸರಕಾರ ಹಸಿವಿನಿಂದ ಬಡಜನರು ಸಾಯಲು ಬಿಡಬಾರದು.

ಕೊರೋನ ಕರ್ಫ್ಯೂ ಕಾಲದಲ್ಲಿ ಕಟ್ಟಡ ಕಾಮಗಾರಿಗಳನ್ನು ನಡೆಸಲು ಸರಕಾರ ಅನುಮತಿ ನೀಡಿದೆ. ಆದರೆ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗಕ್ಕೆ ಕಾರ್ಮಿಕರು ಹೋಗುವುದು ಹೇಗೆ? ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ತಮ್ಮದೇ ಅಥವಾ ಇನ್ಯಾರದೋ ದ್ವಿಚಕ್ರ ವಾಹನದಲ್ಲಿ ಬಂದರೆ ಪೊಲೀಸರು ಹಿಡಿದು ವಾಹನ ಜಪ್ತ್ತಿ ಮಾಡುತ್ತಾರೆ. ಇಂತಹ ಹಲವಾರು ಲೋಪದೋಷಗಳನ್ನು ನಿವಾರಿಸಿ ಯಾರಿಗೂ ತೊಂದರೆಯಾಗದಂತೆ ನಿಯಮಗಳನ್ನು ತರಲಿ

ಲಾಕ್‌ಡೌನ್ ಎಂದು ಹೆಸರಿಸಿದರೆ ಕಾರ್ಮಿಕರಿಗೆ ಪರಿಹಾರ ಕೊಡಬೇಕಾಗುತ್ತದೆ ಎಂದು ಸರಕಾರ ಕರ್ಫ್ಯೂ ಎಂಬ ಶಬ್ದದ ಮೊರೆ ಹೋಗಬಾರದು. ನಾನಾ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಈ ದೇಶವನ್ನು, ನಾಡನ್ನು ಕಟ್ಟಿದವರು. ಇದು ತೆರಿಗೆ ಕಟ್ಟುವ ಸಿರಿವಂತರಿಗೆ ಮಾತ್ರ ಸೇರಿದ ದೇಶವಲ್ಲ. ಈ ನೆಲದ ನಿಜವಾದ ಮಾಲಕರು ತಮ್ಮ ಮೈ ಬೆವರನ್ನು ಹರಿಸಿ ದೇಶವನ್ನು ಅಭಿವೃದ್ಧಿಯತ್ತ ಸಾಗಿಸಿದವರು. ಈ ಕಷ್ಟ ಕಾಲದಲ್ಲಿ ಅವರಿಗೆ ಪರಿಹಾರ ನೀಡಲು ಮೀನಮೇಷ ಬೇಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News