ಮಣಿಪುರದ ಪತ್ರಕರ್ತ, ಹೋರಾಟಗಾರನ ವಿರುದ್ಧ ಎನ್‍ಎಸ್‍ಎ ಹೇರಿದ ಪೊಲೀಸರು

Update: 2021-05-18 12:37 GMT
ಕಿಶೋರ್‍ಚಂದ್ರ ವಾಂಗ್ಖೆಮ್ / ಎರೆಂಡ್ರೊ ಲೀಚೊಂಬಮ್ (facebook)

ಇಂಫಾಲ್: "ಕೇಸರಿ ಪಕ್ಷ ಇನ್ನಾದರೂ ಗೋಮೂತ್ರವನ್ನು ಕೋವಿಡ್-19ಗೆ ಔಷಧಿ ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು" ಎಂದು ಕೋವಿಡ್‍ನಿಂದ ಮಣಿಪುರ ಬಿಜೆಪಿ ರಾಜ್ಯಾಧ್ಯಕ್ಷ ಸೈಖೊಮ್ ತಿಕೇಂದ್ರ ಸಿಂಗ್ ಅವರು ಮೃತಪಟ್ಟ ನಂತರ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದ  ಮಣಿಪುರ ಪತ್ರಕರ್ತ ಕಿಶೋರ್‍ಚಂದ್ರ ವಾಂಗ್ಖೆಮ್ ಹಾಗೂ ಹೋರಾಟಗಾರ ಎರೆಂಡ್ರೊ ಲೀಚೊಂಬಮ್ ಅವರ ವಿರುದ್ಧ ಮಣಿಪುರ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿದ್ದಾರೆ. ತಮ್ಮ ಫೇಸ್ ಬುಕ್ ಪೋಸ್ಟ್ ಗಾಗಿ ಮೇ 13ರಂದು ಬಂಧಿತರಾಗಿದ್ದ  ಇಬ್ಬರಿಗೂ ಇಂಫಾಲ್ ನ್ಯಾಯಾಲಯ  ಸೋಮವಾರ ಜಾಮೀನು ನೀಡಿತ್ತಾದರೂ ಬಿಡುಗಡೆಗೊಳ್ಳುವ ಮುನ್ನವೇ ಅವರ ವಿರುದ್ಧ ಎನ್‍ಎಸ್‍ಎ ಹೇರಲಾಗಿದೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಉಷಮ್ ದೇಬನ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ ಪ್ರೇಮಾನಂದ ಮೀಟೈ ಅವರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.

"ಸಗಣಿ ಹಾಗೂ ಗೋಮೂತ್ರ ಕೆಲಸ ಮಾಡಲಿಲ್ಲ, ಆಧಾರರಹಿತ ಹೇಳಿಕೆ. ನಾಳೆ ನಾನು ಮೀನು ತಿನ್ನುತ್ತೇನೆ,'' ಎಂಬ  ಪೋಸ್ಟ್ ಅನ್ನು ವಾಂಗ್ಖೆಮ್ ಮಾಡಿದ್ದರು.

ಇತ್ತ ಎರೆಂಡ್ರೋ ತಮ್ಮ ಪೋಸ್ಟ್ ನಲ್ಲಿ ``ಸಗಣಿ ಹಾಗೂ ಗೋಮೂತ್ರ ಕೊರೋನವೈರಸ್‍ಗೆ ಔಷಧಿಯಲ್ಲ'' ಎಂದು  ಬರೆದು ಬಿಜೆಪಿ ನಾಯಕನ ಸಾವಿಗೆ  ಸಂತಾಪ ಸೂಚಿಸಿದ್ದರಲ್ಲದೆ "ಔಷಧವು ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ,'' ಎಂದು ಬರೆದಿದ್ದರು.

ನ್ಯಾಯಾಲಯವು ಪೊಲೀಸರ ಕ್ರಮವನ್ನು ಖಂಡಿಸಿತ್ತಲ್ಲದೆ "ಅವರ ಬಂಧನಕ್ಕೆ ಕಾರಣಗಳನ್ನು ನೀಡಬೇಕು ಇಲ್ಲದೇ ಹೋದಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕು,''ಎಂದು ಹೇಳಿತ್ತು.

ವಾಂಗ್ಖೆಮ್ ವಿರುದ್ಧ ಈ ಹಿಂದೆ 2018ರಲ್ಲಿ ಕೂಡ ಎನ್‍ಎಸ್‍ಎ ಹೇರಲಾಗಿತ್ತು. ಆಗ ಅವರು ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿ ಪೋಸ್ಟ್ ಮಾಡಿದ್ದ ಫೇಸ್ ಬುಕ್ ವೀಡಿಯೋ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.

ಎರೆಂಡ್ರೊ ವಿರುದ್ಧ ಕಳೆದ ವರ್ಷದ ಜುಲೈನಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಮಣಿಪುರದ ಬಿಜೆಪಿ ಸರಕಾರದ ಕಟು ಟೀಕಾಕಾರರಾಗಿರುವ ಅವರನ್ನು 2018ರಲ್ಲಿ ಫೇಸ್ ಬುಕ್ ಪೋಸ್ಟ್ ಒಂದರ ಸಂಬಂಧ ಬಂಧಿಸಲಾಗಿತ್ತು. ಅವರು  ಮಣಿಪುರದ ಪೀಪಲ್ಸ್ ರಿಸರ್ಜನ್ಸ್ ಎಂಡ್ ಜಸ್ಟಿಸ್ ಅಲಾಯನ್ಸ್  ಸಂಚಾಲಕರಾಗಿದ್ದಾರೆ,  ಮಣಿಪುರದಲ್ಲಿ ಸೇನಾಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು  ವಾಪಸ್ ಪಡೆಯಬೇಕೆಂದು ಕೋರಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಇರೊಮ್ ಶರ್ಮಿಳಾ ತಮ್ಮ ಉಪವಾಸ ಕೈಬಿಟ್ಟ ನಂತರ ಅವರ ಜತೆಗೂಡಿ ಎರೆಂಡ್ರೋ ಈ ಸಂಘಟನೆ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News