ಎರಡನೇ ಅಲೆಯ ಸುಳಿಯಲ್ಲಿ ಮಾಧ್ಯಮ ಕ್ಷೇತ್ರದ 300ಕ್ಕೂ ಅಧಿಕ ಪತ್ರಕರ್ತರು ಕೋವಿಡ್ ಗೆ ಬಲಿ

Update: 2021-05-19 15:57 GMT

ಹೊಸದಿಲ್ಲಿ,ಮೇ 19: ಕೋವಿಡ್-19 ಸಾಂಕ್ರಾಮಿಕ ಮಾಧ್ಯಮ ಕ್ಷೇತ್ರವನ್ನೂ ಬಿಟ್ಟಿಲ್ಲ. ಹಲವು ಖ್ಯಾತನಾಮರು ಸೇರಿದಂತೆ 300ಕ್ಕೂ ಅಧಿಕ ಪತ್ರಕರ್ತರನ್ನು ಮಹಾಮಾರಿಯು ಬಲಿ ಪಡೆದಿದೆ. 2021 ಎಪ್ರಿಲ್ನಲ್ಲಿ ದಿನಕ್ಕೆ ಸರಾಸರಿ ಮೂವರು ಪತ್ರಕರ್ತರು ಸಾವನ್ನಪ್ಪಿದ್ದರೆ ಈ ಸರಾಸರಿ ಮೇ ತಿಂಗಳಿನಲ್ಲಿ ದಿನಕ್ಕೆ ನಾಲ್ಕಕ್ಕೇರಿದೆ. ಎರಡನೇ ಅಲೆಯು ದೇಶಾದ್ಯಂತ ಹಲವಾರು ಹಿರಿಯ ಪತ್ರಕರ್ತರನ್ನು ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲ,ಅದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯ ಪತ್ರಕರ್ತರನ್ನೂ ಆಪೋಶನಗೈದಿದೆ.

 
ಈ ಬಗ್ಗೆ ಸಮೀಕ್ಷೆ ನಡೆಸಿರುವ ದಿಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಪರ್ಸೆಪ್ಶನ್ ಸ್ಟಡೀಸ್ (ಐಪಿಎಸ್) 2020 ಎಪ್ರಿಲ್ ಮತ್ತು 2021 ಮೇ 16ರ ನಡುವಿನ ಅವಧಿಯಲ್ಲಿ 238 ಪತ್ರಕರ್ತರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಇತರ 82 ಪತ್ರಕರ್ತರೂ ಮೃತಪಟ್ಟಿದ್ದು,ಅವರ ಸಾವುಗಳಿಗೆ ಕೋವಿಡ್-19 ಕಾರಣವಾಗಿತ್ತೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
 
ಮಾಧ್ಯಮ ರಂಗಕ್ಕೆ ಕೋವಿಡ್-19 ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಮಾರಣಾಂತಿಕವಾಗಿ ಪರಿಣಮಿಸಿದೆ. ವರದಿಯು ತಿಳಿಸಿರುವಂತೆ 2020 ಎಪ್ರಿಲ್ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಮೊದಲ ಅಲೆಯಲ್ಲಿ 56 ಪತ್ರಕರ್ತರು ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 2021 ಎಪ್ರಿಲ್1ರಿಂದ ಮೇ 16ರ ನಡುವಿನ ಅವಧಿಯಲ್ಲಿ 171 ಸಾವುಗಳು ಸಂಭವಿಸಿವೆ. ಇತರ ಎಂಟು ಪತ್ರಕರ್ತರು 2021 ಜನವರಿ ಮತ್ತು ಮಾ.31ರ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಐಪಿಎಸ್ ಸಿದ್ಧಪಡಿಸಿರುವ ಮೃತರ ಪಟ್ಟಿಯಲ್ಲಿ ಮಾಧ್ಯಮಗಳ ಎಲ್ಲ ವಿಭಾಗಗಳ ಪತ್ರಕರ್ತರು ಸೇರಿದ್ದಾರೆ.

ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಗರಿಷ್ಠ ಸಂಖ್ಯೆಯಲ್ಲಿ (39) ಪತ್ರಕರ್ತರು ಮೃತಪಟ್ಟಿದ್ದರೆ,37 ಸಾವುಗಳೊಂದಿಗೆ ಉತ್ತರ ಪ್ರದೇಶವು ಉತ್ತರ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ದಿಲ್ಲಿ(30),ಒಡಿಶಾ(26),ಮಹಾರಾಷ್ಟ್ರ(24) ಮತ್ತು ಮಧ್ಯಪ್ರದೇಶ (19) ರಾಜ್ಯಗಳಿವೆ. ಇನ್ನಷ್ಟೇ ದೃಢಪಡಬೇಕಿರುವ 82 ಸಾವುಗಳು ಇದರಲ್ಲಿ ಸೇರಿಲ್ಲ.

ಮೃತ ಪತ್ರಕರ್ತರಲ್ಲಿ ಶೇ.35ರಷ್ಟು(85) ಪತ್ರಕರ್ತರು ಮಹಾನಗರಗಳ ನಿವಾಸಿಗಳಾಗಿದ್ದರೆ,ಶೇ.64ರಷ್ಟು(153) ಪತ್ರಕರ್ತರು ಗ್ರಾಮೀಣ ಭಾರತ ಸೇರಿದಂತೆ ಇತರ ನಗರಗಳಿಗೆ ಸೇರಿದವರಾಗಿದ್ದಾರೆ ಎಂದು ಐಪಿಎಸ್ನ ನಿರ್ದೇಶಕಿ ಡಾ.ಕೋಟ ನಿಲೀಮಾ ತಿಳಿಸಿದ್ದಾರೆ.

ಕೋವಿಡ್-19ಕ್ಕೆ ಬಲಿಯಾದ ಶೇ.55ರಷ್ಟು ಪತ್ರಕರ್ತರು ಮುದ್ರಣ ಮಾಧ್ಯಮಗಳಿಗೆ,ಶೇ.25ರಷ್ಟು ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಮತ್ತು ಶೇ.19ರಷ್ಟು ಫ್ರೀಲಾನ್ಸ್ ಪತ್ರಿಕೋದ್ಯಮಕ್ಕೆ ಸೇರಿದವರಾಗಿದ್ದಾರೆ.

ಪತ್ರಕರ್ತರನ್ನು ಮುಂಚೂಣಿ ಕೊರೋನ ಯೋಧರೆಂದು ಘೋಷಿಸುವಂತೆ ಪ್ರೆಸ್ ಕೌನ್ಸಿಲ್ ಆಪ್ ಇಂಡಿಯಾ(ಪಿಸಿಐ) ಆಗ್ರಹಿಸಿದೆ. ರಾಜ್ಯಗಳು ಹರ್ಯಾಣ ಮಾದರಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಬೇಕು ಎಂದು ಪಿಸಿಐ ಸದಸ್ಯ ಆನಂದ ರಾಣಾ ಹೇಳಿದರು. ಹರ್ಯಾಣ ಸರಕಾರವು ಪತ್ರಕರ್ತರಿಗೆ 5 ಲ.ರೂ.ನಿಂದ 20 ಲ.ರೂ.ವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತಿದೆ.

ಕರ್ನಾಟಕ,ಕೇರಳ ಸೇರಿದಂತೆ ಸುಮಾರು 16 ರಾಜ್ಯಗಳು ಪತ್ರಕರ್ತರನ್ನು ಮುಂಚೂಣಿ ಕೊರೋನ ಯೋಧರೆಂದು ಘೋಷಿಸಿವೆ. ಕೋವಿಡ್-19ರಿಂದ ಮೃತ ಪತ್ರಕರ್ತರ ಕುಟುಂಬಗಳಿಗೆ ಒಡಿಶಾ 15 ಲ.ರೂ.,ಉ.ಪ್ರದೇಶ 5 ಲ.ರೂ. ಮತ್ತು ರಾಜಸ್ಥಾನ ಸರಕಾರ 50 ಲ.ರೂ.ಆರ್ಥಿಕ ನೆರವನ್ನು ಪ್ರಕಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News