×
Ad

ಜಿಂದಾಲ್ ಬಳಿ ಕೋವಿಡ್ ಆಸ್ಪತ್ರೆ: ಉಚಿತ ಸೇವೆಗಾಗಿ ಗುಜರಾತ್‍ನಿಂದ ಆಗಮಿಸಿದ ನರ್ಸಿಂಗ್ ವಿದ್ಯಾರ್ಥಿಗಳು

Update: 2021-05-19 23:24 IST

ಬೆಂಗಳೂರು, ಮೇ 19: ಕೊರೋನ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿಲ್ಲ, ಎಲ್ಲ ಕಡೆ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಗುಜರಾತ್‍ನ ಸೂರತ್‍ನಿಂದ 18 ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಸೇವೆ ಮಾಡಲು ರಾಜ್ಯಕ್ಕೆ ಬಂದಿದ್ದಾರೆ.

ಬಳ್ಳಾರಿ ನಗರದ ಬೆಸ್ಟ್ ನರ್ಸಿಂಗ್ ಕಾಲೇಜಿನ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಾಗೂ ಕೋವಿಡ್ ಕಾರಣದಿಂದ ತಮ್ಮ ಊರುಗಳಿಗೆ ತೆರಳಿದ್ದ ಗುಜರಾತ್ ರಾಜ್ಯದ ವಿದ್ಯಾರ್ಥಿಗಳು ಬಳ್ಳಾರಿ ಜಿಲ್ಲೆಯ ಜಿಂದಾಲ್ ಎದುರುಗಡೆ ನಿರ್ಮಾಣವಾಗುತ್ತಿರುವ ಒಂದು ಸಾವಿರ ಹಾಸಿಗೆಗಳ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ.

18 ವಿದ್ಯಾರ್ಥಿಗಳು ಗುಜರಾತ್ ರಾಜ್ಯದಿಂದ ಮಂಗಳವಾರ ಸಂಜೆ ಆಗಮಿಸಿದ್ದು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ವ್ ತಂಡದ ಸದಸ್ಯರು ಮತ್ತು ಸ್ವಯಂ ಸೇವಕರು ಗುಲಾಬಿ ಹೂಮಳೆ ಸುರಿಸುವ ಮೂಲಕ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಕೋವಿಡ್ ಕಾರಣ ತವರಿಗೆ ತೆರಳಿದ್ದ ವಿದ್ಯಾರ್ಥಿಗಳು ಸೇವೆ ಸಲ್ಲಿಸಲು ಮುಂದೆ ಬಂದಿರುವುದು ಒಂದು ಉತ್ತಮ ಬೆಳವಣಿಗೆ. 18 ಜನ ನರ್ಸಿಂಗ್ ವಿದ್ಯಾರ್ಥಿಗಳ ಆಗಮನ ಒಂದು ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರೆತೆಯನ್ನು ನೀಗಿಸುವುದರ ಜೊತೆಗೆ ಜಿಲ್ಲಾಡಳಿತದ ಕಾರ್ಯಕ್ಕೆ ಕೈಜೋಡಿಸಿದಂತಾಗಲಿದೆ. ಇನ್ನೊಂದು ತಂಡವು ಇದೇ ರೀತಿ ಸೇವೆ ಸಲ್ಲಿಸಲು ಜಿಲ್ಲೆಗೆ ಶೀಘ್ರ ಆಗಮಿಸಲಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಾಖೀಬ್ ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣಕ್ಕೆ ಬಂದ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದ ನಂತರ ಅವರನ್ನು ಉಪಚರಿಸಿ ಬಸ್ ಮುಖಾಂತರ ಜಿಂದಾಲಿನ ನೂತನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ಸಮಯದಲ್ಲಿ ಬೆಸ್ಟ್ ನರ್ಸಿಂಗ್ ಕಾಲೇಜಿನ ಮುಖ್ಯಸ್ಥ ಸತ್ಯನಾರಾಯಣ, ಪ್ರಾಂಶುಪಾಲರಾದ ಪೂರ್ಣಿಮಾ, ಪ್ರಮುಖರಾದ ಭರತ್ ಜೈನ್, ಖ್ವಾಜಾ ಮೊಯಿನುದ್ದೀನ್, ಶಮೀಮ್ ಜಕಾಲಿ, ರಿಝ್ವಾನ್, ಮೈನುದ್ದೀನ್ ಜಕಾಲಿ, ಶ್ವೇತಾ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News