×
Ad

ಪರಿಹಾರದಿಂದ ಜೀವ ಉಳಿಸಲು ಸಾಧ್ಯವೇ: ಜನವಾದಿ ಮಹಿಳಾ ಸಂಘಟನೆ

Update: 2021-05-19 23:25 IST

ಬೆಂಗಳೂರು, ಮೇ 19: ರಾಜ್ಯದ ಮುಖ್ಯಮಂತ್ರಿ ಪ್ರಕಟಿಸಿರುವ ಪ್ಯಾಕೇಜ್ ಜನರಿಗೆ ಅಗತ್ಯ ಪರಿಹಾರವನ್ನು ನೀಡದಿರುವ ಜೀವ ವಿರೋಧಿ ಪ್ಯಾಕೇಜ್ ಆಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಜೀವನವನ್ನು ಉಳಿಸಲಾರದ ಪ್ಯಾಕೇಜ್ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಟೀಕಿಸಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರು ಜೀವನ ನಿರ್ವಹಣೆಯ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಉಚಿತವಾಗಿ 10 ಕೆಜಿ ಅಕ್ಕಿ 6 ತಿಂಗಳ ಕಾಲ ನೀಡಬೇಕು. ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿಯ ಜೊತೆಯಲ್ಲಿ ಕೇರಳ ಮಾದರಿಯ ಅಗತ್ಯ ಆಹಾರ ಪದಾರ್ಥಗಳನ್ನು ನೀಡಬೇಕು. ಆದಾಯ ತೆರಿಗೇತರ ಕುಟುಂಬಗಳಿಗೆ ತಿಂಗಳಿಗೆ 10 ಸಾವಿರ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಬೇಕು. ಸಾಲ ಬಡ್ಡಿ ಸಹಿತ ಮನ್ನಾ ಮಾಡಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಕೇಂದ್ರ ಸರಕಾರ ಶೇ.75, ರಾಜ್ಯ ಸರಕಾರ ಶೇ.25ರಷ್ಟು ಭರಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಬೇಕು. ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕು. ಉದ್ಯೋಗ ಖಾತರಿ ಕೂಲಿ 600 ರೂ.ಗೆ ಹೆಚ್ಚಿಸಿ, 200 ದಿನ ಕೆಲಸ ಹೆಚ್ಚಿಸಿ, ನಗರಕ್ಕೂ ವಿಸ್ತರಿಸಬೇಕು ಎಂದು ಅಧ್ಯಕ್ಷ ಗೌರಮ್ಮ ಆಗ್ರಹಿಸಿದ್ದಾರೆ.

ಕೋವಿಡ್ 2ನೆ ಅಲೆ ವ್ಯಾಪಕವಾಗಿ ವಿಸ್ತರಿಸಿದ್ದು, ಮನೆ ಮನೆಯಲ್ಲಿ ಕುಟುಂಬ ಸಮೇತರಾಗಿ ಕೋವಿಡ್ ಪಾಸಿಟಿವ್ ಆಗಿದ್ದು, ಸರಿಯಾಗಿ ಅಕ್ಸಿಜನ್, ಔಷದಿ, ಲಸಿಕೆಗಳು ಸಿಗದೆ  ಪ್ರಾಣ ಉಳಿಸಿಕೊಳ್ಳಲು ಪರೆದಾಟ ಮಾಡುತ್ತಿದ್ದಾರೆ. ಈ ಸಂಧರ್ಭದಲ್ಲಿ ಸರಕಾರದ ಪ್ಯಾಕೇಜ್ ಘೋಷಣೆ ಮಾಡಿರುವುದು ಏನೇನೂ ಸಾಲದು. ಉದ್ಯೋಗ ಖಾತರಿ ಯೋಜನೆ ಮತ್ತು ಖಾಸಗಿ ಹಣಕಾಸು ಸಂಸ್ಥೆ ನಿಯಂತ್ರಣಗಳ ಬಗ್ಗೆ ಯಾವುದೇ ಚಕಾರವಿಲ್ಲ. ಸಾಲ 2 ತಿಂಗಳು ಮುಂದೂಡಲಾಗಿದೆಯೆ ಹೊರತು, ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಪ್ರಶ್ನೆಯಾಗಲಿ, ಹೊಸ ಸಾಲ ಸೌಲಭ್ಯದ ಪ್ರಸ್ತಾಪ ಇಲ್ಲದ ಸುಳ್ಳಿನ ಪ್ಯಾಕೇಜ್, ಮೋಸದಿಂದ ಕೂಡಿದ ತಂತ್ರಗಾರಿಕೆಯ ಪ್ಯಾಕೇಜ್ ಇದಾಗಿದೆ ಎಂದು ಅವರು ಟೀಕಿಸಿದ್ದಾರೆ.

ಕಳೆದ ವಷ9ದ ಪ್ಯಾಕೇಜ್‍ನ ಅಧ9ದಷ್ಟು ಇರದ ಪ್ರಸಕ್ತ ಪ್ಯಾಕೇಜ್ ಕೋವಿಡ್ 2ನೆ ಅಲೆಯ ವ್ಯಾಪಕತೆ, ಸಾವು-ನೋವಿನ ಪ್ರಮಾಣಕ್ಕೆ ಅನುಗುಣವಾಗಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಲ್ಲದೆ ಮತ್ತೇನೂ ಅಲ್ಲ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ  ಕ್ರಮವಹಿಸದ ರಾಜ್ಯ ಬಿಜೆಪಿ ಸರಕಾರವು ಲಾಕ್‍ಡೌನ್ ಮೂಲಕ ಕೊರೋನ ತಡೆಗಟ್ಟುವ ಭ್ರಮೆ ಘೋಷಿಸಿ, ಇದೀಗ ಅರೆ ಬರೆ ಪ್ಯಾಕೇಜ್ ಘೋಷಣೆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಮುಂದಾಗಿದೆಯೆಂದು ಗೌರಮ್ಮ ಆರೋಪಿಸಿದ್ದಾರೆ

ರಾಜ್ಯ ಸರಕಾರ ಜನತೆ ಮೇಲೆ ಕನಿಷ್ಠ ಕಳಕಳಿ ಇದ್ದರೆ ಕೂಡಲೇ ಜನರಿಗೆ ಕಡೆಪಕ್ಷ ಬದುಕುಳಿಯಲು ಬೇಕಾದಷ್ಟಾದರೂ ಪರಿಹಾರವನ್ನು ನೀಡಬೇಕು. ಇಲ್ಲವಾದರೆ ಮೇ 26ರಂದು ನಮ್ಮ ಸಂಘಟನೆ ವತಿಯಿಂದ ದೇಶವ್ಯಾಪಿ ಮನೆಯಿಂದಲೆ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ' ಎಂದು ಗೌರಮ್ಮ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News