×
Ad

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ ಆದೇಶ ರದ್ದು

Update: 2021-05-20 15:43 IST
ಡಾ.ಎಂ.ಆರ್. ರವಿ

ಚಾಮರಾಜನಗರ, ಮೇ 20: ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಬುಧವಾರ ರಾತ್ರಿ ವರ್ಗಾವಣೆ ಮಾಡಲಾಗಿದ್ದು, ಆದರೆ ಗುರುವಾರ ಬೆಳಗ್ಗೆ ರವಿ ಅವರ ವರ್ಗಾವಣೆ ಆದೇಶ ರದ್ದಾಗಿದೆ. ಮೂರು ತಿಂಗಳ ಅಂತರದಲ್ಲಿ ಎರಡು ಬಾರಿ ವರ್ಗಾವಣೆ ಆಗಿದ್ದರೂ ಕೂಡಾ ಎರಡು ಬಾರಿಯೂ ಅವರ ವರ್ಗಾವಣೆ ಆದೇಶ ರದ್ದು ಮಾಡಲಾಗಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಒತ್ತಡವಿದೆ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ.

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪವನ್ನು ನ್ಯಾಯಾದೀಶರ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಬಳಿಕ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರನ್ನು ಬುಧವಾರ ರಾತ್ರಿ ವರ್ಗಾವಣೆ ಮಾಡಿತ್ತು. ಆದರೆ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರವು ಬುಧವಾರ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಜಲಾನಯನ ಇಲಾಖೆಯಲ್ಲಿದ್ದ ಡಾ. ಬಿ.ಸಿ. ಸತೀಶ್ ರವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿತ್ತು. ವರ್ಗಾವಣೆಯ ಮಾಹಿತಿ ಪಡೆದರೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಜಿಲ್ಲೆಯಲ್ಲೇ ಉಳಿದುಕೊಂಡಿದ್ದರು.

ರವಿ ಅವರು ಗುರುವಾರ ಬೆಳಗ್ಗೆಯಿಂದಲೇ ಪ್ರಭಾವಿ ರಾಜಕಾರಣಿಗಳ ಮೂಲಕ ವರ್ಗಾವಣೆಗೆ ತಡೆಹಿಡಿಯಲು ಪ್ರಯತ್ನಿಸಿದ್ದು, ವರ್ಗಾವಣೆ ರದ್ದು ಆದೇಶದ ಹಿಂದೆ ಮುಖ್ಯಮಂತ್ರಿ ಕುಟುಂಬಸ್ಥರೊಬ್ಬರ ಪಾತ್ರವೂ ಇದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಮಂದಿ ಸಾವನ್ನಪ್ಪಿದ ಬಳಿಕ ಜಿಲ್ಲಾಡಳಿತದ ಕಾರ್ಯವೈಖರಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಜಿಲ್ಲಾಧಿಕಾರಿ ರವಿ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪವನ್ನು ನ್ಯಾಯಾಧೀಶರ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಡಾ.ರವಿ ಅವರನ್ನು ವರ್ಗಾವಣೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಬುಧವಾರ ರಾತ್ರಿ ವರ್ಗಾವಣೆ ಆದೇಶ ಹೊರಡಿಸಿ, ಗುರುವಾರ ಬೆಳಗ್ಗೆ ಆದೇಶವನ್ನು ರದ್ದು ಮಾಡಲಾಗಿದೆ. 

37 ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಸರಕಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬ ಹಲವರು ನಿರೀಕ್ಷಿಸಿದ್ದರು. ಆದರೆ ಪ್ರಭಾವಿಗಳ ಒತ್ತಡದಿಂದ ವರ್ಗಾವಣೆ ಆದೇಶಕ್ಕೆ ತಡೆ ಹಿಡಿಯಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

'ವರ್ಗಾವಣೆ ಆಗಿಲ್ಲ'

ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನನಗೆ ವರ್ಗಾವಣೆ ಆಗಿಲ್ಲ ಎಂದು ಐಎಎಸ್ ಅಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದ್ದಾರೆ.

ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಹುದ್ದೆಯಿಂದ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ ಎಂದು ಟ್ವೀಟ್ ಮಾಡಿರುವ ಡಾ.ಬಿ.ಸಿ. ಸತೀಶ್, ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ವೀಕ್ಷಕನಾಗಿ ನಿಯೋಜಿಸಲಾಗಿತ್ತು. ಸದ್ಯ ಯಾವುದೇ ಹುದ್ದೆಗೆ ನಿಯೋಜಿಸಿಲ್ಲ ಎಂದು ಅವರು ಹೇಳಿದರು. ನಿನ್ನೆ ರಾತ್ರಿ ಬುಧವಾರ ವರ್ಗಾವವಣೆ ಆಗಿತ್ತು. ಬೆಳಗ್ಗೆ ಬದಲಾಗಿದೆ. ನಾನು ಚಾಮರಾಜನಗರಕ್ಕೆ ಬರುತ್ತಿಲ್ಲ ಎಂದು ಡಾ.ಬಿ.ಸಿ. ಸತೀಶ್ ಹೇಳಿದರು.

ನಾನು ಇಲ್ಲೇ ಇದ್ದೀನಿ ಎಂದ ಡಾ.ರವಿ

ವರ್ಗಾವಣೆ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಾ.ಎಂ.ಆರ್.ರವಿ ಅವರು, ನಾನು ಇಲ್ಲೇ ಇದ್ದೀನಿ. ವರ್ಗಾವಣೆ ಆಗಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದ ಗುಂಡ್ಲುಪೇಟೆ ಬಿಜೆಪಿ ಶಾಸಕ ಮತ್ತು ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ವರ್ಗಾವಣೆ ಆಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News