ಕ್ರೈಸ್ತ ಸಮುದಾಯದ ವಿರುದ್ಧ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ: ಎಸ್‍ಡಿಪಿಐ
ಬೆಂಗಳೂರು ಮೇ 20: ಚರ್ಚ್‍ಗಳಲ್ಲಿ ಕೋವಿಡ್ ಲಸಿಕೆ ಪಡೆಯಬಾರದೆಂದು ಪ್ರಚಾರ ಪಡಿಸಲಾಗುತ್ತಿದೆ ಎಂಬ ಕಪೋಲಕಲ್ಪಿತ ಹೇಳಿಕೆಯನ್ನು ನೀಡಿರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯ ಕೋಮುವಾದಿ ನಡೆಯನ್ನು ಖಂಡಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಂಪೂರ್ಣ ಸೋತು ಹೋಗಿರುವ ಈ ಸರಕಾರವು ರೋಗಿಗಳಿಗೆ ಬೆಡ್‍ನಿಂದ ಹಿಡಿದು ಶವ ಸಂಸ್ಕಾರದ ವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ವಿಫಲವಾಗಿದೆ. ಬಿಜೆಪಿ ಸರಕಾರದ ವಿರುದ್ಧ ರೋಗಿಗಳು ಮತ್ತು ಕೋವಿಡ್ ಕಾರಣದಿಂದಾಗಿ ಹಲವು ವಿಧಗಳಿಂದ ಸಂತ್ರಸ್ತರಾದವರು ಪ್ರತಿನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೆಲ್ಲಾ ಜನರ ಮನಸ್ಸಿನಿಂದ ಮರೆಮಾಚಲು ಕೋಮು ಪ್ರೇರಿತ ಹೇಳಿಕೆಯನ್ನು ನೀಡುತ್ತಾ ಜನರ ಮನಸ್ಸನ್ನು ದಿಕ್ಕುತಪ್ಪಿಸಲು ಮಾಡುವ ಸಂಘಪರಿವಾರ ಷಡ್ಯಂತರದ ಮುಂದುವರಿದ ಭಾಗವಾಗಿದೆ ಸಂಸದೆಯ ಈ ಹೇಳಿಕೆ. ಶೋಭಾ ಕರಂದ್ಲಾಜೆ ಮೊದಲು ವ್ಯಾಕ್ಸಿನ್, ಆಕ್ಸಿಜನ್ ಮುಂತಾದ ಕೋವಿಡ್ ಸಂಬಂದಿತ ಉಪಕರಣಗಳನ್ನು ಕದ್ದು ಸಿಕ್ಕಿ ಬಿದ್ದಿರುವ ತಮ್ಮ ಪಕ್ಷದ ನಾಯಕರಿಗೆ ಶಿಕ್ಷೆ ಕೊಡಿಸಲು ಒತ್ತಾಯಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಹಾಗೂ ತನ್ನ ಕ್ಷೇತ್ರದಲ್ಲೇ ಕೋವಿಡ್ ಭಾದಿತವಾಗಿ ಲಾಕ್ ಡೌನ್‍ನಿಂದ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಅನೇಕ ಕುಟುಂಬಗಳಿವೆ, ಅವರಿಗೆ ಸಹಾಯ ಮಾಡುವ ಸಲುವಾಗಿ ಕಾರ್ಯ ನಿರ್ವಹಿಸಲಿ. ಅದು ಬಿಟ್ಟು ಇಂತಹ ಸಾಂಕ್ರಾಮಿಕದ ಸಮಯದಲ್ಲೂ ತನ್ನ ಎಂದಿನ ಕೋಮುವಾದಿ ಚಾಳಿಯನ್ನು ಮುಂದುವರಿಸುವುದು ಬಿಟ್ಟು, ತಾನು ಸಂಸದೆ ಎಂಬ ಕನಿಷ್ಠ ಜ್ಞಾನದಿಂದ ಕೆಲಸ ನಿರ್ವಹಿಸುವುದು ಒಳಿತು. ತನ್ನ ಅವಿವೇಕಿತನದ ಹೇಳಿಕೆಯನ್ನು ಹಿಂಪಡೆದು ಕ್ರೈಸ್ತ ಸಮುದಾಯದ ಕ್ಷಮೆ ಕೇಳಬೇಕೆಂದು ಮುಜಾಹಿದ್ ಪಾಷಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.