ಚಿಕ್ಕಮಗಳೂರು: ಸರಕಾರಿ ವಾಹನಗಳಲ್ಲಿ ಮೋಜು ಮಸ್ತಿಗೆ ಹೊರಟ ಅರಣ್ಯ ಇಲಾಖೆ ಅಧಿಕಾರಿಗಳು: ಆರೋಪ
ಚಿಕ್ಕಮಗಳೂರು, ಮೇ 21: ಕೊರೋನ ನಿಯಂತ್ರಣದ ಉದ್ದೇಶದಿಂದ ಜಿಲ್ಲಾಧಿಕಾರಿ ನಾಲ್ಕು ದಿನಗಳ ಕಾಲ ಕಠಿಣ ನಿರ್ಬಂಧಗಳ ಲಾಕ್‍ಡೌನ್ ಮಾಡಿದ್ದು, ಸರಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿಗೆ ಕಡಿವಾಣ ಹಾಕಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಜವಬ್ದಾರಿ ಮೆರೆತು ಮೋಜು ಮಸ್ತಿಗೆ ಹೊರಟಿದ್ದರೆನ್ನಲಾದ ಘಟನೆಯೊಂದು ವರದಿಯಾಗಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದ ಸಮೀಪದಲ್ಲಿ ಗೇಮ್ ಫಾರೆಸ್ಟ್ ಎಂಬ ಹೆಸರಿನ ರೆಸಾರ್ಟ್ ಇದ್ದು, ಈ ರೆಸಾರ್ಟ್‍ನಲ್ಲಿ ಮೋಜು ಮಸ್ತಿ ಮಾಡಲು ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೂ ಗುರುವಾರ ಮಧ್ಯಾಹ್ನದ ವೇಳೆ ಸುಮಾರು 10 ಸರಕಾರಿ ಹಾಗೂ ಖಾಸಗಿ ವಾಹನಗಳಲ್ಲಿ ಹೊರಟಿದ್ದಾರೆ ಎನ್ನಲಾಗಿದೆ. ಈ ವಾಹನಗಳು ಸಂತವೇರಿ ಗ್ರಾಮದ ಮೂಲಕ ಹಾದು ಹೋಗುತ್ತಿದ್ದ ವೇಳೆ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಇಷ್ಟು ವಾಹನಗಳು ಒಮ್ಮೆಲೆ ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡಿದ್ದಾರೆ.
ಈ ಪೈಕಿ ಕೆಲ ಗ್ರಾಮಸ್ಥರು ವಾಹನಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ತಬ್ಬಿಬ್ಬಾಗಿದ್ದು, ಉತ್ತರ ನೀಡಲು ತಡವರಿಸಿದ್ದಾರೆಂದು ತಿಳಿದು ಬಂದಿದೆ. ಅಧಿಕಾರಿಗಳು ಗ್ರಾಮ ಸಮೀಪದ ರೆಸಾರ್ಟ್‍ಗೆ ಮೋಜು ಮಸ್ತಿ ಮಾಡಲು ಹೋಗುತ್ತಿದ್ದಾರೆಂಬುದನ್ನು ಖಾತರಿ ಮಾಡಿಕೊಂಡು ಅಧಿಕಾರಿಗಳ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಾಹನಗಳ ಸಂಚಾರ, ಜನಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ ಅಧಿಕಾರಿಗಳು ಗುಂಪಾಗಿ ಹೋಗುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆಂದು ತಿಳಿದು ಬಂದಿದೆ.
ಸರಕಾರಿ ವಾಹನಗಳಲ್ಲಿ ರೆಸಾರ್ಟ್‍ಗೆ ಹೊರಟಿದ್ದ ಅರಣ್ಯಾಧಿಕಾರಿಗಳ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಸೇರಿದಂತೆ ವಿವಿಧ ಅರಣ್ಯ ವಲಯದ ಅಧಿಕಾರಿಗಳು ಇದ್ದರೆಂದು ಗ್ರಾಮಸ್ಥರು ತಿಳಿಸಿದ್ದು, ಕೋವಿಡ್ ಸಂದರ್ಭದಲ್ಲಿ ಸರಕಾರಿ ಕೆಲಸ ಸಮಯದಲ್ಲೇ ರೆಸಾರ್ಟ್‍ಗೆ ಹೊರಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಳ್ಳಬೇಕೆಂದು ಸಂತವೇರಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರಕಾರ ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆ ಸಂಬಂಧ ಅರಣ್ಯ ಇಲಾಖೆಯಿಂದ ವರದಿ ಕೇಳಿದ್ದು, ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸಂತವೇರಿ ಗ್ರಾಮದ ಮೂಲಕ ಅರಣ್ಯದಲ್ಲೇ ನಡೆದುಕೊಂಡು ಹೋಗಲು ತೆರಳಿದ್ದರು. ಆದರೆ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದು ಹಿಂದಕ್ಕೆ ಕಳುಹಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಅಧಿಕಾರಿಗಳು ಮೋಜು ಮಸ್ತಿಗೆ ಬಂದಿಲ್ಲ. ಗ್ರಾಮಸ್ಥರ ಆರೋಪದಲ್ಲಿ ಹುರುಳಿಲ್ಲ.
- ಸುನಿಲ್ ಪನ್ವಾರ್, ಡಿಎಫ್‍ಒ, ಚಿಕ್ಕಮಗಳೂರು
ಗುರುವಾರ ಸಂತವೇರಿ ಗ್ರಾಮದ ರೆಸಾರ್ಟ್‍ಗೆ 10ಕ್ಕೂ ಹೆಚ್ಚು ಸರಕಾರಿ ವಾಹನಗಳಲ್ಲಿ ಅರಣ್ಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ. ಈ ತಂಡದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಬಂದಿದ್ದಾರೆ. ಮೋಜು ಮಸ್ತಿಗೆ ಹೋಗುತ್ತಿದ್ದ ವೇಳೆ ಗ್ರಾಮಸ್ಥರು ತಡೆದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಸಮಂಜಸವಾದ ಉತ್ತರವನ್ನು ಗ್ರಾಮಸ್ಥರಿಗೆ ಹೇಳಿಲ್ಲ. ಈ ವಿಡಿಯೋವನ್ನು ನಾನು ಗುರುವಾರ ಸಂಜೆ ಡಿಸಿ, ಎಸ್ಪಿಗೆ ಕಳುಹಿಸಿದ್ದೇನೆ. ಲಾಕ್‍ಡೌನ್ ಅವಧಿಯಲ್ಲಿ ಈ ಅಧಿಕಾರಿಗಳು ಏಕೆ ಬಂದಿದ್ದಾರೆಂಬುದನ್ನು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ಅಧಿಕಾರಿಗಳ ವಾಹನಗಳನ್ನು ತಡೆದ ಗ್ರಾಮಸ್ಥರು, ಗ್ರಾಪಂ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದು ಖಂಡನೀಯ. ಅಧಿಕಾರಿಗಳು ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಮೋಜು ಮಸ್ತಿಗೆ ಬಂದಿದ್ದಾರೆ. ಜಿಲ್ಲಾಡಳಿತ ಈ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು.
- ಎಸ್.ಎಲ್.ಬೋಜೇಗೌಡ, ವಿಧಾನ ಪರಿಷತ್ ಸದಸ್ಯ