ಶವ ಸಾಗಿಸಲು ಉಚಿತ ಆ್ಯಂಬುಲೆನ್ಸ್ ಸೇವೆ, ಹಣ ಪಡೆದರೆ ಚಾಲನಾ ಪರವಾನಿಗೆ ರದ್ದು: ಸಚಿವ ಅಶೋಕ್
ಬೆಂಗಳೂರು, ಮೇ 21: ಶವಗಳನ್ನು ಸಾಗಿಸಲು ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಲು ರಾಜ್ಯ ಸರಕಾರ ಮುಂದಾಗಿದೆ. ಹಾಗೂ ರೋಗಿಗಳನ್ನು ಸಾಗಿಸಲು ಆ್ಯಂಬುಲೆನ್ಸ್ ಚಾಲಕರು ಬೇಕಾಬಿಟ್ಟಿ ಹಣ ಕೇಳುವಂತಿಲ್ಲ. ಆ್ಯಂಬುಲೆನ್ಸ್ ಸೇವೆಗೂ ಸರಕಾರ ದರ ನಿಗದಿ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಶವ ಸಾಗಿಸುವ ಆ್ಯಂಬುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಲಾಗುವುದು. ಯಾರೂ ಕೂಡ ಹಣ ಪಡೆಯುವಂತಿಲ್ಲ. ಅಸ್ಥಿ ನೀಡುವಾಗಲೂ ಹಣ ಪಡೆಯುವಂತಿಲ್ಲ. ಚಾಲಕರು ಹಣ ಪಡೆದರೆ ಮೂರು ವರ್ಷ ಚಾಲನಾ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ ವಾಹನಗಳಿಗೆ ಪ್ರಾರಂಭದ 10 ಕಿಮೀ ಚಾಲನೆಗೆ 1500 ರೂ. ದರ ನಿಗದಿ ಪಡಿಸಲಾಗಿದ್ದು, ಆ ನಂತರ ಪ್ರತಿ ಕಿಮೀಗೆ 120ರೂ. ಆಗಿದೆ. ಕಾಯುವಿಕೆಗೆ ಪ್ರತಿ ಗಂಟೆಗೆ 200 ನಿಗದಿಯಾಗಿದೆ. ಅದೇ ರೀತಿ ಲೈಫ್ ಸಪೋರ್ಟ್ ಹೊಂದಿರುವಂತ ಆ್ಯಂಬುಲೆನ್ಸ್ ಗಳಿಗೆ 10 ಕಿಲೋಮೀಟರ್ ಗೆ 2 ಸಾವಿರ ರೂ., ಆನಂತರ ಶುರುವಾಗುವ ಪ್ರಯಾಣಕ್ಕೆ ಕಿಮೀಗೆ 120 ರೂ. ದರ ನಿಗದಿ ಮಾಡಿದೆ. ಅಲ್ಲದೇ ಪ್ರತಿ ಗಂಟೆಗೆ ಕಾಯುವಿಕೆಯ ಚಾರ್ಜ್ ಆಗಿ ರೂ.250 ದರ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬ್ಲ್ಯಾಕ್ ಫಂಗಸ್, ರೆಮ್‍ಡೆಸಿವಿರ್ ಔಷಧದ ಬಗ್ಗೆ ಚರ್ಚೆ ನಡೆಸಲಾಯಿತು. ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 1,050 ಡೋಸ್ ಔಷಧ ಬಂದಿದೆ. ರಾಜ್ಯದಲ್ಲಿ ರೆಮ್‍ಡೆಸಿವಿರ್ ಕೊರತೆ ಸದ್ಯಕ್ಕಿಲ್ಲ, ಅಗತ್ಯವಿರುವಷ್ಟು ರೆಮ್‍ಡೆಸಿವಿರ್ ಕೊಡುವ ವ್ಯವಸ್ಥೆ ಇದೆ ಎಂದು ಅವರು ಹೇಳಿದ್ದಾರೆ.
ಮೊದಲು 18ರಿಂದ 20ಸಾವಿರ ರೆಮ್‍ಡೆಸಿವಿರ್ ಅಗತ್ಯವಿತ್ತು. ಈಗ 5 ಸಾವಿರ ರೆಮ್‍ಡೆಸಿವಿರ್ ಮಾತ್ರ ಬೇಕಿದೆ. ದಿನಕಳೆದಂತೆ ರೆಮ್‍ಡೆಸಿವಿರ್ ಬೇಡಿಕೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಈವರೆಗೆ 150 ಮಂದಿ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ತುತ್ತಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ಕೊಡಲಾಗುತ್ತದೆ. ಬ್ಲ್ಯಾಕ್ ಫಂಗಸ್ ಔಷಧಿ ಸಂಬಂಧ ಕೇಂದ್ರ ಸಚಿವ ಸದಾನಂದಗೌಡರಿಗೂ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿರುವ ಆರೋಪವನ್ನು ನಿರಾಕರಿಸಿದ ಸಚಿವ ಆರ್. ಅಶೋಕ್, ಹಳ್ಳಿ ಹಳ್ಳಿಗೆ ತೆರಳಿ ಟೆಸ್ಟ್ ಮಾಡಿಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳು ತಂಡ ಮಾಡಿ ಕಳಿಸಲಾಗುತ್ತದೆ. ಪ್ರತಿ ಹಳ್ಳಿಗೆ ಎರಡು ದಿನಕ್ಕೊಮ್ಮೆ ತಂಡ ಹೋಗಲಿದೆ. ವೈದ್ಯಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ಯೋಜನೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ಸಾವಿರ ಅನಾಥ ಶವಗಳ ಅಸ್ಥಿ ಸರಕಾರದ ಬಳಿ ಇದೆ. ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ ಆಫ್ ಇದೆ. ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಸಂಬಂಧಿಕರು ನಾನಾ ಪರಿಸ್ಥಿತಿಗಳ ಕಾರಣದಿಂದಾಗಿ ಅಸ್ಥಿ ಪಡೆಯುತ್ತಿಲ್ಲ. ಹೀಗಾಗಿ ಸರಕಾರವೇ ಸಂಸ್ಕಾರ ಮಾಡಲು ತೀರ್ಮಾನಿಸಿದೆ. ಕಂದಾಯ ಇಲಾಖೆಯೇ ಗೌರವಯುತವಾಗಿ ಶವ ಸಂಸ್ಕಾರ ಮಾಡಲಿದೆ.
-ಆರ್.ಅಶೋಕ್, ಕಂದಾಯ ಸಚಿವ