ಆರ್ಥಿಕ ನೆರವಿನ ಜೊತೆಗೆ ಉಚಿತ ವಿದ್ಯುತ್, ನೀರು ಪೂರೈಕೆಗೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯ
ಬೆಂಗಳೂರು, ಮೇ 21: ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಸಂಘಟಿತ ಹಾಗೂ ಅಸಂಘಟಿತ ಸಂಪ್ರದಾಯಿಕ ವೃತ್ತಿಪರ ಕುಲಕಸುಬಿನ ವೃತ್ತಿಯನ್ನು ಅವಲಂಬಿಸಿರುವ ಸಮುದಾಯಗಳಿಗೆ ಹಾಗೂ ದುಡಿಯುವ ವರ್ಗದ ಜನರಿಗೆ 10 ಸಾವಿರ ರೂ.ಆರ್ಥಿಕ ನೆರವಿನ ಜೊತೆಗೆ ಉಚಿತವಾಗಿ ವಿದ್ಯುತ್ ಮತ್ತು ನೀರು ಪೂರೈಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಸಾಂಪ್ರದಾಯಿಕ ವೃತ್ತಿಪರ ಕುಲಕಸುಬಿನ ವೃತ್ತಿ ಅವಲಂಬಿಸಿರುವ ಸೋಮವಂಶ ಆರ್ಯ ಕ್ಷತ್ರಿಯ, ದೇವಾಡಿಗ, ವಿಶ್ವಕರ್ಮ, ಗಾಣಿಗ, ಕುರುಬ, ನೇಕಾರ, ಕುಂಬಾರ, ಗೊಲ್ಲ, ಸವಿತಾ ಸಮಾಜ, ಹಡಪದ, ಈಡಿಗ, ಅಗ್ನಿವಂಶ, ಭಾವಸಾರ ಕ್ಷತ್ರಿಯ, ನಾಮದೇವ ಸಿಂಪಿ, ತಿಗಳ, ಕಮ್ಮಾರ, ಮಡಿವಾಳ, ದರ್ಜಿ, ಮೇದರು, ಅಲೆಮಾರಿ, ಉಪ್ಪಾರ, ಕುಲಾಲ, ಗೋರ್ಖಾ, ಬುಡಕಟ್ಟು.
ಕುಲಕಸುಬು ಮಾಡುತ್ತಿರುವ ಮಂಗಳವಾದ್ಯ, ನಾದಸ್ವರ, ಡೋಲು, ಚಿನ್ನ ಬೆಳ್ಳಿ, ಕಲ್ಲಿನ ವಿಗ್ರಹ, ಮರ ಕೆಲಸ, ಚಿತ್ರ ಬರೆಯುವವರು, ತೇರು ತಯಾರಕರು, ಶುದ್ಧ ಎಣ್ಣೆ ತಯಾರಕರು, ಬೊಂಬೆಗಳ ತಯಾರಕರು, ಕೈಮಗ್ಗ ನೇಕಾರರು, ವಿದ್ಯುತ್ ಮಗ್ಗ ನೇಕಾರರು, ಕಂಬಳಿ ನೇಕಾರರು, ಮಡಿಕೆ ತಯಾರಕರಾದ ಕುಂಬಾರರು ಸೇರಿದಂತೆ ದಿನಗೂಲಿ ಮಾಡುವವರಿಗೆ ಮೂಗಿಗೆ ತುಪ್ಪ ಸವರುವ ನೆಪ ಮಾತ್ರದ ಪ್ಯಾಕೇಜ್ ಬದಲಿಗೆ 10 ಸಾವಿರ ರೂ.ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.