ಕೊಳಗೇರಿ ನಿವಾಸಿಗಳಿಗೆ ಮಾಸಿಕ 10 ಸಾವಿರ ರೂ.ನಂತೆ ಪರಿಹಾರ ಭತ್ತೆ ಘೋಷಿಸಲು ಆಗ್ರಹ
ಬೆಂಗಳೂರು, ಮೇ 22: `ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಮತ್ತು ಕೊಳಗೇರಿ(ಸ್ಲಂ) ನಿವಾಸಿಗಳಿಗೆ ಲಾಕ್‍ಡೌನ್ ಆರ್ಥಿಕ ಪರಿಹಾರವಾಗಿ ಮೂರು ತಿಂಗಳು ತಲಾ 10 ಸಾವಿರ ರೂ. ಭತ್ತೆ ಘೋಷಿಸಬೇಕು. ಸ್ಲಂ ನಿವಾಸಿಗಳಿಗೆ ರಾಷ್ಟ್ರೀಯಾ ವಿಪತ್ತು ಪರಿಹಾರದ ಮಾನದಂಡದಂತೆ ಮೂರು ತಿಂಗಳು (ಪಡಿತರ ವಿತರಣೆ ಹೊರತು ಪಡಿಸಿ) ತಲಾ 10 ಕೆ.ಜಿ.ಯಂತೆ ಅಗತ್ಯ ವಸ್ತುಗಳನ್ನು ನೀಡಬೇಕು' ಎಂದು ಆಗ್ರಹಿಸಿ `ಸ್ಲಂ ಜನಾಂದೋಲನ ಕರ್ನಾಟಕ'ದಿಂದ ರಾಜ್ಯಾದ್ಯಂತ ಮನೆ-ಮನೆಯಿಂದಲೇ ಶುಕ್ರವಾರ ಸತ್ಯಾಗ್ರಹ ನಡೆಸಲಾಯಿತು.
'ರಾಜ್ಯದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಮತ್ತು ಮನೆ ಮನೆಗೆ ಲಸಿಕೆ ಅಭಿಯಾನ ಪ್ರಾರಂಭಿಸಬೇಕು. ಕೋವಿಡ್ ಚಿಕಿತ್ಸೆ ಉಚಿತಗೊಳಿಸಿ ಮತ್ತು ಅದರ ವೆಚ್ಚ ಸಂಪೂರ್ಣವಾಗಿ ಸರಕಾರವೇ ಭರಿಸಬೇಕು. ಕೋವಿಡ್‍ನಿಂದ ಸಾವಿಗೀಡಾದ ಕುಟುಂಬಗಳಿಗೆ 25 ಲಕ್ಷ ರೂ.ಪರಿಹಾರ ನೀಡಬೇಕು. ಈಗಾಗಲೇ ನೆರೆ ರಾಜ್ಯಗಳು ಈ ವಿಷಯವಾಗಿ ಪ್ರತಿ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿವೆ' ಎಂದು ತಿಳಿಸಲಾಗಿದೆ.
ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರು, ಕ್ಷೌರಿಕರು, ಶ್ರಮಿಕರು, ಆಟೋ ಚಾಲಕರು, ಚಿಂದಿ ಹಾಯುವವರು, ಹಮಾಲಿಗಳು, ಬಟ್ಟಿ ಕಾರ್ಮಿಕರು, ಚಮ್ಮಾರರು, ಗೃಹ ಕಾರ್ಮಿಕರು ಸೇರಿ ಇತರೆ ಸಮುದಾಯಗಳಿಗೆ 1,250 ಕೋಟಿ ರೂ. ಪರಿಹಾರವನ್ನು ಘೋಷಿಸಿರುವುದು ಸ್ವಾಗತರ್ಹ. ಆದರೆ, ಇದರಲ್ಲಿ ನಗರದ ಜನಸಂಖ್ಯೆ ಶೇ.45ರಷ್ಟು ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ವಂಚಿತ ಸಮುದಾಯಗಳಿಗೆ, ಬಿಪಿಎಲ್ ಕುಟುಂಬಗಳಿಗೆ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಕೇಂದ್ರದಿಂದ ಮೇ ಹಾಗೂ ಜೂನ್ ತಿಂಗಳಿಗೆ 5 ಕೆಜಿ ಅಕ್ಕಿ ಉಚಿತ ವಿಸ್ತರಣೆ ಈಗಾಗಲೇ ಪ್ರಧಾನಿ ಘೋಷಿಸಿರುವುದನ್ನೇ ಪುನರ್ ವ್ಯಾಖ್ಯಾನಿಸುವುದನ್ನು ಬಿಟ್ಟರೆ ಬೇರಾವುದೇ ವಿಶೇಷತೆ ಇಲ್ಲ ಎಂದು ಆಕ್ಷೇಪಿಸಲಾಗಿದೆ.
ಪರಿಹಾರ ಘೋಷಣೆಯಲ್ಲಿ ನಗರ ವಂಚಿತ ಸಮುದಾಯವಾದ ಸ್ಲಂ ಜನರಿಗೆ ಆದ್ಯತೆ ನೀಡದಿರುವುದನ್ನು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಖಂಡಿಸುತ್ತದೆ. ಕೋವಿಡನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಸರಕಾರ ರಾಷ್ಟ್ರೀಯ ವಿಪತ್ತಿನ ಮಾನದಂಡಗಳ ಅನ್ವಯ ಪರಿಹಾರವನ್ನು ಘೋಷಿಸಬೇಕು. ಈ ಪ್ಯಾಕೇಜ್ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಘೋಷಣೆಯಾಗಿದೆ. ಇದರಿಂದ ನಗರ ವಂಚಿತ ಸಮುದಾಯಗಳಿಗೆ ಯಾವುದೇ ರೀತಿಯ ಪ್ರಯೋಜನ ದೊರಕುವುದಿಲ್ಲ. ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ಈ ಅಂಶಗಳು ಜಾರಿಗೆ ಬರುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗುತ್ತದೆಯೋ ಗೊತ್ತಿಲ್ಲ. ಆದುದರಿಂದ ರಾಜ್ಯ ಸರಕಾರ ಮುಂದಿನ ಕೋವಿಡ್ ಆರ್ಥಿಕ ಪರಿಹಾರದಲ್ಲಿ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಸೇರ್ಪಡೆಗೊಳಿಸಿ ಘೋಷಿಸಬೇಕು ಎಂದು ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.