ಶಾಲಾ-ಕಾಲೇಜು ಶಿಕ್ಷಕರಿಗೆ ಪರಿಹಾರ ಘೋಷಿಸಿ: ಸಿಎಂಗೆ ವಿಧಾನಪರಿಷತ್ ಸದಸ್ಯ ಅರುಣ ಶಹಪೂರ ಪತ್ರ
ಬೆಂಗಳೂರು, ಮೇ 21: ಕೋವಿಡ್ ಒಂದು ಹಾಗೂ ಎರಡನೆ ಅಲೆಯಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲಾ ಕಾಲೇಜಿನ ಸಿಬ್ಬಂದಿಗಳಿಗೆ ಆರ್ಥಿಕ ಪರಿಹಾರ ಘೋಷಿಸಬೇಕೆಂದು ವಿಧಾನಪರಿಷತ್ ಸದಸ್ಯ ಅರುಣ ಶಹಪೂರ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕೋವಿಡ್‍ನಿಂದ ಅತಿಹೆಚ್ಚು ಸಂಕಷ್ಟ ಅನುಭವಿಸುತ್ತಿರುವವರು ಖಾಸಗಿ ಹಾಗೂ ಸರಕಾರಿ ಶಾಲಾ ಕಾಲೇಜಿನಲ್ಲಿ ಅನುದಾನರಹಿತವಾಗಿ ಸಿಬ್ಬಂದಿ ಹಾಗೂ ಅತಿಥಿ ಶಿಕ್ಷಕರಾಗಿದ್ದಾರೆ. ಅಧ್ಯಾಪಕ ವೃತ್ತಿಯನ್ನೇ ನಂಬಿಕೊಂಡು ಶಿಕ್ಷಕರು ಕೋವಿಡ್ ಲಾಕ್‍ಡೌನ್‍ನಿಂದಾಗಿ ಪರಿತಪಿಸುತ್ತಿದ್ದಾರೆ. ಇವರಿಗೆ ಸರಕಾರದ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರೆ ವೃತ್ತಿಯಲ್ಲಿ ತೊಡಗಿರುವವರಿಗೆ ರಾಜ್ಯದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆದರೆ, ಶಿಕ್ಷಕ ವೃತ್ತಿಯನ್ನು ಬದುಕಾಗಿಸಿಕೊಂಡಿರುವ ಶಿಕ್ಷಕರನ್ನು ಆರ್ಥಿಕ ಸೌಲಭ್ಯದಿಂದ ಹೊರಗಿಟ್ಟಿರುವುದು ತಾರತಮ್ಯದ ನೀತಿಯಾಗಿದೆ. ಇದು ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಮಾಡುವ ಅನ್ಯಾಯವಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಪರಿಹಾರ ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.