×
Ad

ಕೋವಿಡ್ ನಿರ್ವಹಣೆ ಅವ್ಯವಸ್ಥೆಯಿಂದ ಕೊಡಗು ತಲೆ ತಗ್ಗಿಸುವಂತ್ತಾಗಿದೆ: ಎಂಎಲ್‍ಸಿ ವೀಣಾಅಚ್ಚಯ್ಯ

Update: 2021-05-21 18:45 IST

ಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಸುಧಾರಣೆಯಾಗದ ವೈದ್ಯಕೀಯ ವ್ಯವಸ್ಥೆಯಿಂದಾಗಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತರು ಭೀತಿಯ ವಾತಾವರಣದ ನಡುವೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುಸ್ಥಿತಿಯಿಂದಾಗಿ ಜಿಲ್ಲೆ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ವೈದ್ಯರೊಬ್ಬರು ಲಂಚ ಪಡೆದಿದ್ದು, ಇಡೀ ವೈದ್ಯಕೀಯ ವ್ಯವಸ್ಥೆಗೆ ಮುಖಭಂಗವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್  ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟ ಪಡದವರನ್ನು ಬಿಡುಗಡೆಗೊಳಿಸಿ ಉತ್ಸಾಹ ಇರುವ ಹೊಸಬರಿಗೆ ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಭಯದಿಂದಲೇ ಹೆಚ್ಚು ಸಾವು ಸಂಭವಿಸುತ್ತಿದ್ದು ರೋಗಿಗಳನ್ನು ಖಿನ್ನತೆ ಕಾಡುತ್ತಿದೆ. ನಿರಂತರವಾಗಿ ಸೋಂಕಿತರ ಕುಟುಂಬದ ಸದಸ್ಯರಿಂದ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಸೋಂಕಿತರಲ್ಲಿರುವ ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡಲು ದಿನಕ್ಕೆ ಎರಡು, ಮೂರು ಬಾರಿಯಾದರೂ ವೈದ್ಯರು, ಶುಶ್ರೂಷಕಿಯರು, ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸೋಂಕಿತರನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆಯಿಂದ ಬೇಸತ್ತು ಸೋಂಕಿತರೊಬ್ಬರನ್ನು ಕೇರಳ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಡಿಕೇರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳು ನಿಜಕ್ಕೂ ತಲೆತಗ್ಗಿಸುವಂತಿದೆ. ಕೋವಿಡ್ ಎರಡನೇ ಅಲೆ ಬರುತ್ತದೆ ಎನ್ನುವ ಮಾಹಿತಿ ದೊರೆತ ದಿನದಿಂದಲೇ  ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದರೆ ಈ ರೀತಿಯ ಸಂದಿಗ್ಧ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.

ಕೊಡಗಿನ ಆಸ್ಪತ್ರೆಗಳನ್ನು ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು, ಹುದ್ದೆಯನ್ನು ಭರ್ತಿ ಮಾಡುವ ಕಾರ್ಯವನ್ನು ತಕ್ಷಣ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಕೊಡಗಿನ ಚಿತಾಗಾರಗಳಲ್ಲಿ ಬೆಂಕಿ ಆರದ ಪರಿಸ್ಥಿತಿ ಇದೆ. ಪ್ರತಿದಿನ ಹತ್ತು-ಹನ್ನೆರಡು ಮಂದಿ ಅಸುನೀಗುತ್ತಿದ್ದಾರೆ. ಇದರ ನಡುವೆಯೇ ವೈದ್ಯರೊಬ್ಬರು ಲಂಚ ಪಡೆದ ಪ್ರಕರಣ ನಡೆದಿರುವುದು ಖಂಡನೀಯ. ಕೆಲಸ ಮಾಡಲು ಇಷ್ಟ ಇಲ್ಲದವರನ್ನು ಹೊರ ಕಳುಹಿಸಲಿ, ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ, ವೈದ್ಯರ ಕೊರತೆಯನ್ನು ತುಂಬಲು ಮೈಸೂರಿನಿಂದ ತಜ್ಞ ವೈದ್ಯರನ್ನು ಕರೆ ತರಲಿ ಎಂದರು. 

ಹೆಚ್ಚಿನ ಸೋಂಕಿತರು ಇತರ ಕಾಯಿಲೆಯಿಂದ ಮೃತಪಡುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ. ಸೋಂಕಿತರಲ್ಲಿ ಬೇರೆ ಯಾವ ಕಾಯಿಲೆಗಳಿವೆ ಎನ್ನುವ ಬಗ್ಗೆಯೂ ವೈದ್ಯರು ಖಾತ್ರಿಪಡಿಸಿಕೊಂಡು ಚಿಕಿತ್ಸೆ ನೀಡಬೇಕು. ಔಷಧಿಗಳ ಅಡ್ಡ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲೆಯ ಜನರು ಕೂಡ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಆದೇಶಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈಗ ಜಾರಿಯಲ್ಲಿರುವ ಲಾಕ್ಡೌನ್ ನಲ್ಲಿ ವಾರದ ಮೂರು ದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಇದರಿಂದ ಜಿಲ್ಲೆಯ ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿದೆ. ವಾರದ ಎರಡು ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿನಾಯಿತಿ ನೀಡಿದರೆ ಅನುಕೂಲವಾಗಲಿದೆ ಎಂದು ವೀಣಾಅಚ್ಚಯ್ಯ ಹೇಳಿದರು. 

ಜಿಲ್ಲೆಯ ರೈತಾಪಿ ವರ್ಗಕ್ಕೆ ಕೃಷಿ ಸಂಬಂಧಿತ ಗೊಬ್ಬರ ಮತ್ತಿತರ ಪರಿಕರಗಳನ್ನು ಸಾಗಿಸಲು ಅವಕಾಶವನ್ನು ನೀಡಬೇಕು. ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಕೇವಲ ಘೋಷಣೆಗಷ್ಟೇ ಸೀಮಿತವಾಗಬಾರದು, ಪ್ರತಿಯೊಂದು ವರ್ಗಕ್ಕೂ  ಪರಿಹಾರ ದೊರೆಯಬೇಕು ಎಂದರು.

ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ ಕೊಡಗು ನಮ್ಮದು ಎನ್ನುವ ಮನೋಭಾವ ಎಲ್ಲಾ ಜನಪ್ರತಿನಿಧಿಗಳಲ್ಲಿ ಇರಬೇಕು. ಜಿಲ್ಲೆಗೆ ಬೇಕಾದ ಅಗತ್ಯತೆಗಳನ್ನು ತರಲು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಜನರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಜಕೀಯ ರಹಿತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿದೆ ಎಂದು ವೀಣಾಅಚ್ಚಯ್ಯ ಹೇಳಿದರು.

ಬ್ಲ್ಯಾಕ್ ಫಂಗಸ್ ಎನ್ನುವ ಮತ್ತೊಂದು ಸೋಂಕು ಕಾಡುತ್ತಿದ್ದು, ಎಲ್ಲರಲ್ಲೂ ಆತಂಕವಿದೆ. ಇದರ ನಿರ್ಮೂಲನೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರ ಹಣದ ಕೊರತೆ ಇಲ್ಲ ಎಂದು ಹೇಳುತ್ತಿದೆ, ಕೊಡಗಿನಲ್ಲಿ ಮತ್ತಷ್ಟು ಕೋವಿಡ್ ಆಸ್ಪತ್ರೆಗಳನ್ನು ತೆರೆಯಲಿ. ನಾಪೋಕ್ಲು ವಿಭಾಗದ ಸುತ್ತಮುತ್ತಲ ಗ್ರಾಮಸ್ಥರು ಮಡಿಕೇರಿಗೆ ಬಂದು ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ನಾಪೋಕ್ಲುವಿನಲ್ಲಿ ಆಸ್ಪತ್ರೆಯನ್ನು ಆರಂಭಿಸಬೇಕು, ಊಟದ ವ್ಯವಸ್ಥೆಯನ್ನು ಸ್ಥಳೀಯರೇ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಅನೇಕ ತಪ್ಪುಗಳು ನಡೆದು ಹೋಗಿದೆ. ಇನ್ನೂ ಕೂಡ ವ್ಯವಸ್ಥೆ ಸುಧಾರಣೆಯಾಗದಿದ್ದಲ್ಲಿ ಅದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ವೀಣಾಅಚ್ಚಯ್ಯ ತಿಳಿಸಿದರು.

ಇತ್ತೀಚೆಗೆ ಸೋಂಕಿತರೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ರೀತಿಯ ಘಟನೆಗಳು ಮರುಕಳಿಸಬಾರದು, ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮತ್ತೊಂದು ಸಭೆ ನಡೆಸಿ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ವಾರಕ್ಕೆ ಮೂರು ದಿನ ವಿನಾಯಿತಿ ನೀಡಲಾಗಿದ್ದು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಈ ಸಮಯದಲ್ಲಿ ಜನಜಂಗುಳಿ  ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ವಾರದ ಎರಡು ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾಲಾವಕಾಶ ನೀಡಲಿ ಎಂದು ತಿಳಿಸಿದರು. ಜಿಲ್ಲಾಡಳಿತ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ, ಆದರೆ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗಳು ನಡೆದರೆ ಸತ್ಯಾಂಶ ತಿಳಿಯುತ್ತದೆ.ಅನೇಕರು ಭಯದಿಂದಲೇ ಪರೀಕ್ಷೆಗೆ ಮಾಡಿಸಿಕೊಳ್ಳುತ್ತಿಲ್ಲವೆಂದು ವೀಣಾಅಚ್ಚಯ್ಯ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News