×
Ad

ರಾಜ್ಯದಲ್ಲಿ ಮೇ 24ರಿಂದ ಮತ್ತೆ 14 ದಿನ ಲಾಕ್‌ಡೌನ್: ಸಿಎಂ ಯಡಿಯೂರಪ್ಪ

Update: 2021-05-21 19:11 IST

ಬೆಂಗಳೂರು, ಮೇ 21: ರಾಜ್ಯದಲ್ಲಿ ಕೊರೋನ ಸೋಂಕು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದು, ಸಾವಿನ ಸಂಖ್ಯೆಯೂ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಕೋವಿಡ್ ಎರಡನೆ ಅಲೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಮೇ 24ರ ಬೆಳಗ್ಗೆಯಿಂದ ಜೂನ್ 7ರ ಬೆಳಗ್ಗೆ 6ಗಂಟೆಯ ವರೆಗೆ 14 ದಿನಗಳ ಕಾಲ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಲಾಕ್‍ಡೌನ್‍ನಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಜನರ ಹಿತದೃಷ್ಟಿಯಿಂದ ಮತ್ತೆ ಲಾಕ್‍ಡೌನ್ ವಿಸ್ತರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೀಗಾಗಿ ರಾಜ್ಯದ ಜನತೆ ಸಹಕಾರ ನೀಡಬೇಕು. ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ಕಠಿಣ ನಿರ್ಬಂಧ: ಹಾಲು, ತರಕಾರಿ, ಮಾಂಸ, ಮೊಟ್ಟೆ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಪ್ರತಿನಿತ್ಯ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, 10 ಗಂಟೆಯ ಬಳಿಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಜನರು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದು, ಇನ್ನು ಮುಂದೆ ಅದಕ್ಕೆ ಅವಕಾಶವಾಗದಂತೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಸಾರ್ವಜನಿಕರು ಅದಕ್ಕೆ ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಇದೇ ವೇಳೆ ಕೋರಿದರು.

ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ-ಹಳ್ಳಿಗಳಿಗೂ ರೋಗ ವ್ಯಾಪಿಸಿದೆ. ಆ ಹಿನ್ನೆಲೆಯಲ್ಲಿ ಜನರು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಉಚಿತ ಚಿಕಿತ್ಸೆ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‍ಗೆ ಸರಕಾರ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರಿಗೆ ಈ ರೋಗಕ್ಕೆ ತಗುಲುವ ದುಬಾರಿ ವೆಚ್ಚ ಭರಿಸಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯದ ಸರಕಾರ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್‍ಗೆ ಉಚಿತ ಚಿಕಿತ್ಸೆ ನೀಡಲಿದ್ದು, ಆ ವೆಚ್ಚವನ್ನು ಸರಕಾರವೇ ಭರಿಸಲಿದೆ. ಹೀಗಾಗಿ ಜನತೆ ಯಾವುದೇ ಸಂದರ್ಭದಲ್ಲಿಯೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಅಭಯ ನೀಡಿದರು.

ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸಿಎಸ್ ಜಾವೇದ್ ಸೇರಿದಂತೆ ಹಲವು ಗಣ್ಯರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿಂದೆ ಹೊರಡಿಸಲಾಗಿರುವ ಪರಿಷ್ಕೃತ ಮಾರ್ಗಸೂಚಿ ಅನ್ವಯ ಅನುಮತಿ ಪಡೆದು ಅಂತರ್ ರಾಜ್ಯ ಹಾಗೂ ರಾಜ್ಯದ ಹೊರಗೆ ಸಂಚರಿಸಲು ಯಾವುದೆ ನಿರ್ಬಂಧವಿಲ್ಲ. ಜೊತೆಗೆ ಸರಕು ಸಾಗಣೆ ಮಾಡುವ ವಾಹನಗಳು ಸಂಚಾರ(ಖಾಲಿ ವಾಹನಗಳು ಸೇರಿದಂತೆ)ಕ್ಕೂ ಯಾವುದೆ ನಿರ್ಬಂಧವಿಲ್ಲ.

ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ, ಕೊರೋನ ಸೋಂಕು ನಿಯಂತ್ರಣದ ನಿಟ್ಟಿನಲ್ಲಿರಾಜ್ಯಾದ್ಯಂತ ವಿಧಿಸಲಾಗಿದ್ದ ಕಠಿಣ ನಿರ್ಬಂಧವನ್ನು ಮೇ 24ರಿಂದ ಜೂನ್ 7ರ ಬೆಳಗ್ಗೆ 6ಗಂಟೆಯವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರ್ಬಂಧಗಳನ್ನು ಮುಂದುವರಿಸಿದ್ದು, ಮುಂದೆಯೂ ಜನರು ಸಹಕಾರ ನೀಡಬೇಕು'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News