ಆಟೋ, ಕ್ಯಾಬ್ ಚಾಲಕರಿಗೆ ಆನ್‍ಲೈನ್ ಮೂಲಕ ಪರಿಹಾರ ಹಣ ನೇರ ಪಾವತಿ
ಬೆಂಗಳೂರು, ಮೇ 21: `ಕೋವಿಡ್-19 ಸಾಂಕ್ರಾಮಿಕ 2ನೆ ಅಲೆಯ ಹಿನ್ನೆಲೆಯಲ್ಲಿ ಮೇ 19ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 3 ಸಾವಿರ ರೂ.ಗಳನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಈ ಪರಿಹಾರ ಧನ ನೀಡಲು 'ಸೇವಾಸಿಂಧು' ವೆಬ್ ಪೋರ್ಟಲ್ ಮೂಲಕ ಅರ್ಜಿ ಸ್ವೀಕರಿಸಲು ಅಗತ್ಯವಿರುವ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಈ ವ್ಯವಸ್ಥೆಯು ಕಾರ್ಯರೂಪಕ್ಕೆ ಬಂದೊಡನೆಯೇ ಅರ್ಹ ಚಾಲಕರುಗಳ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಎಲ್ಲ ಅರ್ಹ ಚಾಲಕರುಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಲಾಗುವುದು.
ಆದುದರಿಂದ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರುಗಳು ಪರಿಹಾರ ಧನ ಕೋರಿ ಅರ್ಜಿಗಳನ್ನು ಅನ್ಯ ಮಾರ್ಗದಲ್ಲಿ ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡುವ ಅವಶ್ಯಕತೆ ಇಲ್ಲವೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.