ಬೆಳಗಾವಿ: ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಪ್ರಕರಣ: ಐಜಿಪಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

Update: 2021-05-21 17:46 GMT

ಬೆಳಗಾವಿ, ಮೇ 21: ಬೆಳಗಾವಿ ಜಿಲ್ಲೆಯ ಯಮಕನಮರಡಿ ವ್ಯಾಪ್ತಿಯಲ್ಲಿ ಪೊಲೀಸರು ಕಾರು ತಡೆಗಟ್ಟಿ ತಪಾಸಣೆ ನಡೆಸಿದ ಬಳಿಕ ಕಾರಿನಲ್ಲಿದ್ದ 4 ಕೆ.ಜಿ. 900 ಗ್ರಾಂ. ಚಿನ್ನ ನಾಪತ್ತೆಯಾದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆ ಆರಂಭ ಮಾಡುತ್ತಿದ್ದಂತೆಯೇ ಐಜಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಉತ್ತರ ವಲಯ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

ಅಲ್ಲದೆ, ಗೋಕಾಕ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಮದಾರ್ ರನ್ನು ಐಎಸ್‍ಡಿಗೆ, ಡಿಎಸ್‍ಬಿ ಇನ್‍ಸ್ಪೆಕ್ಟರ್ ರಾಮೇಶ್ವರ ಕಲ್ಯಾಣಶೆಟ್ಟಿ ಅವರನ್ನು ಹುಬ್ಬಳ್ಳಿ-ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಮತ್ತು ಯಮಕನಮರಡಿ ಪೊಲೀಸ್ ಠಾಣೆ ಪಿಎಸ್‍ಐ ರಮೇಶ ಪಾಟೀಲ ಅವರನ್ನು ಹುಬ್ಬಳ್ಳಿ-ಧಾರವಾಡದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈ ಮಧ್ಯೆ, ಮಂಗಳೂರಿನ ಉದ್ಯಮಿಗೆ ಸೇರಿದ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಡಿಟೆಕ್ಟಿವ್ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ತನಿಖೆಯನ್ನು ಮುಂದುವರಿಸಿದೆ.

2021ರ ಜ.9ರಂದು ಕಾರು ತಡೆದು ಪರಿಶೀಲನೆ ನಡೆಸಿದ್ದರು. ಕಾರಿನ ಒಳಗೆ ಮಾಡಿಫೈ ಮಾಡಿದ್ದರಿಂದ ಸಂಶಯಾಸ್ಪದ ವಾಹನವೆಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಪ್ರಕರಣವನ್ನು ಮುಂದೂಡಿತ್ತು. ಹೀಗಾಗಿ, ಕಾರನ್ನು ಯಮಕನಮರಡಿ ಠಾಣೆಯಲ್ಲಿ ನಿಲ್ಲಿಸಲಾಗಿತ್ತು. ಎ.16ಕ್ಕೆ ಕಾರು ನ್ಯಾಯಾಲಯದಲ್ಲಿ ಬಿಡುಗಡೆಯಾದಾಗ ಮಾಲಕರು ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇಲ್ಲದಿರುವುದು ತಿಳಿದು ಬಂದಿತ್ತು. 

ಈ ನಡುವೆ, ಕಾರಿನ ಹಿಂದಿನ ಭಾಗದ ಗಾಜು ಒಡೆದು ಹೊಸ ಗಾಜು ಹಾಕಿಸಲಾಗಿತ್ತು. ಇದರಿಂದ, ಅನುಮಾನಗೊಂಡ ಕಾರಿನ ಮಾಲಕರು ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಕಾರಿನ ಏರ್ ಬ್ಯಾಗ್‍ನ ಜಾಗದಲ್ಲಿ ಚಿನ್ನ ಇಡಲಾಗಿತ್ತು ಎಂದು ತಿಳಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪೊಲೀಸರು, ಪ್ರಕರಣದಲ್ಲಿ ಇಲಾಖೆಯವರೇ ಇರಬಹುದಾದ ಸಾಧ್ಯತೆಗಳು ಇರುವುದರಿಂದ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಸಿಐಡಿಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News