×
Ad

ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡುವ ಉದ್ದೇಶವೇನು?: ಸಿದ್ದರಾಮಯ್ಯರಿಗೆ ಬಿಜೆಪಿ ಪ್ರಶ್ನೆ

Update: 2021-05-22 17:31 IST
ಸಿದ್ದರಾಮಯ್ಯ (File Photo)

ಬೆಂಗಳೂರು, ಮೇ 22: `ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ, ಶಾದಿಭಾಗ್ಯ ಯೋಜನೆಯನ್ನು ಏಕೆ ಜಾರಿಗೆ ತಂದಿದ್ದು ಎಂಬುದಕ್ಕೆ ಈಗ ಉತ್ತರ ಸಿಗುತ್ತಿದೆ. ಚಾಮರಾಜಪೇಟೆಯಂತಹ ಕ್ಷೇತ್ರವನ್ನು ಸಮಯ ಬಂದಾಗ ಅಪ್ಪಿಕೊಳ್ಳುವ ಉದ್ದೇಶಕ್ಕಾಗಿ ಅಲ್ವೇ ಸಿದ್ದರಾಮಯ್ಯ?' ಎಂದು ಬಿಜೆಪಿ ಇಂದಿಲ್ಲಿ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಕೋವಿಡ್ ಬಂದ ನಂತರ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ, ಎಷ್ಟು ಲಸಿಕೆ ಹಾಕಿಸಿದ್ದೀರಿ ಎಂಬಿತ್ಯಾದಿ ಜನಪರ ಪ್ರಶ್ನೆ ಕೇಳಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸರ್ವಾಂಗವೂ ಉರಿಯುತ್ತದೆ. ಆದರೆ, ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡುವ ಉದ್ದೇಶವನ್ನಾದರೂ ಸ್ಪಷ್ಟಪಡಿಸಿ ಸಿದ್ದರಾಮಯ್ಯ' ಎಂದು ಕೇಳಿದೆ.

`ಕೋವಿಡ್ ಸಂದರ್ಭವನ್ನು ಬಳಸಿ ಮತ್ತೊಂದು ಮಹಾವಲಸೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧವಾಗಿರುವ ಸೂಚನೆ ಕಂಡುಬರುತ್ತಿದೆ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರೂ ಚಾಮರಾಜಪೇಟೆ ಕ್ಷೇತ್ರದ ಮೇಲೆ ವಿಶೇಷ ಒಲವು ತೋರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು?' ಎಂದು ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

`ಭಾರತದಲ್ಲಿ ನಿರ್ಮಿತವಾದ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಆರೋಗ್ಯ ತಜ್ಞರು ಖಚಿತ ಪಡಿಸಿದ್ದಾರೆ. ಲಸಿಕೆಯ ವಿಚಾರದಲ್ಲಿ ರಾಜಕಾರಣ ಮಾಡಿ, ಜನರಲ್ಲಿ ಭೀತಿ ಹುಟ್ಟಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯದ ಜನತೆಯ ಕ್ಷಮೆ ಕೇಳಲಿ' ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News