ಸ್ಥಳೀಯರ ಕಡೆಗಣನೆ ಬಗ್ಗೆ ಎಂಆರ್‌ಪಿಎಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪೋಸ್ಟ್: ಸಂಸದ ನಳಿನ್ ಗೆ ಜನರ ತರಾಟೆ

Update: 2021-05-22 15:21 GMT
Photo: Facebook/Nalin Kumar Kateel

ಮಂಗಳೂರು: ಎಂಆರ್ ಪಿಎಲ್ ನಲ್ಲಿ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಎಂಆರ್ ಪಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಬಗ್ಗೆ ಫೇಸ್ಬುಕ್ ಫೋಸ್ಟ್ ಮಾಡಿದ್ದಾರೆ. ಆದರೆ ಇದಕ್ಕೆ ಕಮೆಂಟ್ ಮಾಡಿರುವ ಹಲವರು ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂಆರ್ ಪಿಎಲ್ ನ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟೇಶ್ ಹಾಗೂ ಎಂಆರ್ ಪಿಎಲ್ ಜಿ.ಜಿ.ಎಂ. ಶ್ರೀ ಕೃಷ್ಣರಾಜ್ ರವರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಾಯಿತು. ಈ ಬಗ್ಗೆ ವಿವರವಾಗಿ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಎಂಆರ್ ಪಿಎಲ್ ಆಡಳಿತ ಮಂಡಳಿಯ ಅಧಿಕಾರಿಗಳ ಸಭೆಯನ್ನು ಇಂದು ಸಂಜೆ ಕರೆಯಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಲವರು ಕಮೆಂಟ್ ಮಾಡಿದ್ದಾರೆ.

ನಳಿನ್ ಕುಮಾರ್ ಅವರ ಈ ಪೋಸ್ಟ್ ಗೆ 400ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, ಹೆಚ್ಚಿನ ಕಮೆಂಟ್ ಗಳು ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಪೋಸ್ಟ್ 150 ಅಧಿಕ ಶೇರ್ ಮಾಡಿದ್ದಾರೆ. 

"ಈ ಕರ್ಮಕಾಂಡ ನಿನ್ನೆ ಮೊನ್ನೆಯದಲ್ಲ ಸಂಸದರೆ, ಪ್ರಾರಂಭ ಅದಾಗಿನಿಂದಲೂ ಉಂಟು, ಅಲ್ಲ ಸಂಸದರೆ ನೀವು ಸಂಸದರಾಗಿ 12 ವರ್ಷ ಮೇಲಾಯ್ತು ಇಷ್ಟರತನಕ ಗೊತಿರ್ಲಿಲ್ವ ನಿಮ್ಗೆ ಇದು ನಾಚಿಗೆಡಿನ ಸಂಗತಿ. ನನ್ನ ಗೆಳೆಯರ ಬಳಗದಲ್ಲೇ ಎಷ್ಟೋ ಜನ ಈ ಪರೀಕ್ಷೆ ಅದೆಷ್ಟೋ ವರ್ಷಗಳಿಂದ ಬರೆದವರಿದ್ದಾರೆ, ಅವರ ಬಾಯಿಂದ ಬರುವುದು ಒಂದೇ ಮಾತು ನಮ ಏತ್ ಬರೆಂಡಲ ಆತೆಯ ಅವು ಫಸ್ಟ್ ಗೆ ಸೆಟ್ಟಿಂಗ್ ಆದ್ ಇಪ್ಪುಂಡ್ ನಮ ಪೊಕ್ಕಡೆ ಬರೆಪುನು ಅಂತ" ಎಂದು ಶ್ರೀನಾಥ್ ಮುನ್ನ ಎಂಬವರು ಕಮೆಂಟ್ ಮಾಡಿದ್ದಾರೆ.

ಸಿ ಟಿ ಪಾಟಿಲ್ ಎಂಬವರು ಕಮೆಂಟ್ ಮಾಡಿ, "ನಿಮ್ಮ ಸರಕಾರದಲ್ಲಿ ನೇಮಕಾತಿ ನಡೆಯುವುದೇ ಅಪರೂಪ ನಡೆದರೂ ಈ ರೀತಿ ಅನ್ಯಾಯವೇ." ಎಂದು ಪ್ರಶ್ನಿಸಿದ್ದರೆ, ಸುಶಾಂತ್ ಹೆಗ್ಡೆ ಎಂಬವರು "ಮಳೆ ಬಂದು ಹೋದ ಮೇಲೆ ಕೊಡೆ ಹಿಡಿದರೆ ಏನು ಪ್ರಯೋಜನ???" ಎಂದು ವ್ಯಂಗ್ಯವಾಡಿದ್ದಾರೆ.

"ಊರು ಕೊಳ್ಳೆ ಹೊಡೆದ ಮೇಲೆ..ಕೋಟೆ ಬಾಗಿಲು ಹಾಕಿದ ಹಾಗಾಯಿತು ನಿಮ್ಮ ಕಥೆ..ಈ ವಿಚಾರ ನಿಮ್ಮ ಗಮನಕ್ಕೆ ಬಾರದು ವಿಷಾದನೀಯ ಅನ್ನಬೇಕೋ..ಮತ್ತೆ ಇನ್ನೇನು ಅನ್ನಬೇಕೋ ಗೊತ್ತಿಲ್ಲ.. ಎತ್ತಿನಹೊಳೆ ಯೋಜನೆ ಹೋರಾಟದಲ್ಲೇ ನಿಮ್ಮ ನಾಟಕ ನೋಡಿ ಸಾಕಾಗಿದೆ‌..ಜಿಲ್ಲೆಯ ಯುವಕ/ಯುವತಿಯವರಿಗಾದರೂ ಸ್ವಲ್ಪ ಒಳ್ಳೆದು ಮಾಡಿ ಸಾಕು .. " ಎಂದು ನಾಗರಾಜ್ ಪದವಿನಂಗಡಿ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"12 ವರ್ಷಗಳಲ್ಲಿ ಏನು ನಿದ್ದೆ ಮಾಡ್ತಿದ್ರಾ??? ಊರಿನವರಿಗೆ 90% ಆದ್ಯತೆ ಕೊಡಿ ... ಆಗದೇ ಇದ್ದರೆ ಎಂ.ಆರ್‌.ಪಿ.ಎಲ್ ಅನ್ನು ಬೇರೆಡೆಗೆ ವರ್ಗಾಯಿಸಿ ಆ ಜಾಗದಲ್ಲಿ ಬೇರೆ ಸಂಸ್ಥೆಗೆ ವಹಿಸಿ... ಊಟಕ್ಕಿಲ್ಲದ ಉಪ್ಪಿನಕಾಯಿಯ ಅಗತ್ಯ ನಮಗೂ ಇಲ್ಲಾ... ಬ್ಯಾಂಕ್ ಗಳಲ್ಲಿ ಕೂಡ ಇದೇ ರೀತಿ ಕ್ರಮ ಕೈಗೊಳ್ಳಿ ನಿಮಗೆ ಆಗದೇ ಇದ್ದರೆ ದಯವಿಟ್ಟು ರಾಜಿನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕೊಡಿ" ಎಂದು ರವಿಚಂದ್ರ ನಾಯ್ಕ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಅಲ್ರಿ ನಿಮಗಾಗಿ ಜೀವ ಒತ್ತೆ ಇಟ್ಟು ಹೋರಾಟ ಮಾಡಿದ ನಿಮ್ಮ ಪಕ್ಷದ ಕಾರ್ಯಕರ್ತರಿಗಾದರೂ ಹುದ್ದೆ ಕೊಡಿ" ಬಿ ಲಕ್ಷ್ಮಣ್ ಎಂಬವರು ಕಮೆಂಟ್ ಮಾಡಿದ್ದು, "12 ವರ್ಷ ಮಲಗಿದ್ದ ಸಂಸದರನ್ನು ಯಾಕೋ ಎಬ್ಬಿಸಿದ್ರಿ.." ಎಂದು ದೀಪಕ್ ಜೆ ಶೆಟ್ಟಿ ಎಂಬವರು ಸಂಸದರನ್ನು ಟೀಕಿಸಿದ್ದಾರೆ.

"ಕಳೆದ 13 ವರ್ಷದಿಂದ ಸಂಸದರಾಗಿ ನಿಮಗೆ ಇಂದು ತಿಳಿತೆ ವಿಷಯ ನಿಮ್ಮ ಕಾಳಜಿಗೆ ತುಂಬು ಹೃದಯದ ಧನ್ಯವಾದಗಳು" ಎಂದು ಯಾದವ್ ಪೂಜಾರಿ ಎಂಬವರು ಕಮೆಂಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News