ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವು; ರಾಜ್ಯ ಸರಕಾರದಿಂದ 48 ಲಕ್ಷ ರೂ.ಪರಿಹಾರ ಮೊತ್ತ ಬಿಡುಗಡೆ
ಬೆಂಗಳೂರು, ಮೇ 22: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಮಂದಿಗೆ ತಲಾ 2 ಲಕ್ಷ ರೂ.ನಂತೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ `ಮುಖ್ಯಮಂತ್ರಿ ಪರಿಹಾರ ನಿಧಿ'ಯಿಂದ ಒಟ್ಟು 48 ಲಕ್ಷ ರೂ.ಗಳನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಕಂದಾಯ ಇಲಾಖೆ ಉಪಕಾರ್ಯದರ್ಶಿ ಕೆ.ಸಿ.ಕುಮಾರ್ ಅವರು ಆದೇಶ ಹೊರಡಿಸಿದ್ದು, ಬಿಡುಗಡೆ ಮಾಡಿರುವ ಅನುದಾನವನ್ನು ವಿಪತ್ತು ನಿರ್ವಹಣಾ ನಿಧಿ ಉಳಿತಾಯ ಖಾತೆಯಿಂದ ಸಿಎಂ ಪರಿಹಾರ ನಿದಿಗೆ ಜಮಾ ಆಗಿರುವ 48 ಲಕ್ಷ ರೂ.ಗಳನ್ನು ಆರ್‍ಟಿಜಿಎಸ್ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಬ್ಯಾಂಕ್ ಖಾತೆಗೆ ಜಮಾ ಮಾಡತಕ್ಕದ್ದು. ಮೇ 2 ಮತ್ತು 3ರಂದು ಮೃತಪಟ್ಟ ಕೋವಿಡ್ ಸೋಂಕಿತರ ಕುಟುಂಬದ ಸದಸ್ಯರಿಗೆ ಆರ್‍ಟಿಜಿಎಸ್ ಅಥವಾ ಎನ್‍ಇಎಫ್‍ಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡತಕ್ಕದ್ದು. ಮೃತಪಟ್ಟ ಎಲ್ಲ ವ್ಯಕ್ತಿಗಳ ವಾರಸುದಾರರಿಗೆ ಪರಿಹಾರ ಮೊತ್ತವನ್ನು ಪಾವತಿಸಿರುವ ಬಗ್ಗೆ ಹೈಕೋರ್ಟ್‍ಗೆ ಅನುಸರಣಾ ವರದಿಯನ್ನು ಸಲ್ಲಿಸಲು ಅನುವಾಗುವಂತೆ ಪರಿಹಾರ ಪಾವತಿಯ ವಿವರಗಳ ವರದಿಯನ್ನು ಅಡ್ವೋಕೇಟ್ ಜನರಲ್ ಇವರಿಗೆ ಮತ್ತು ಸರಕಾರಕ್ಕೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಪರಿಹಾರ ಮೊತ್ತ ಪಾವತಿ ವಿಳಂಬವಾದರೆ, ಲೋಪ ಕಂಡುಬಂದರೆ ಜಿಲ್ಲಾಧಿಕಾರಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.