×
Ad

ಹತಾಶೆ ವ್ಯಕ್ತಪಡಿಸುವ ಬಿಜೆಪಿ ಅಧಿಕಾರಕ್ಕೆ ಅಂಟಿ ಕುಳಿತಿದ್ದಾದರೂ ಏಕೆ?: ಕಾಂಗ್ರೆಸ್ ಪ್ರಶ್ನೆ

Update: 2021-05-22 20:46 IST

ಬೆಂಗಳೂರು, ಮೇ 22: `ರಾಜ್ಯದಲ್ಲಿ ಮತ್ತೊಂದು ಸವಾಲು ಎಂಬಂತೆ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದೆ. ಈವರೆಗೂ ಸಡಿಕಾರ ಈ ಸೋಂಕಿನ ಬಗ್ಗೆ ಚರ್ಚಿಸಿಲ್ಲ, ಎಷ್ಟು ಸೋಂಕಿತರಿದ್ದಾರೆ ಎಂದು ಮಾಹಿತಿ ಪಡೆದಿಲ್ಲ, ಅಂಪೋಟೆರಿಸಿನ್ ಬಿ ಬೇಡಿಕೆಯ ಅಂಕಿಸಂಖ್ಯೆಯ ಮಾಹಿತಿ ಪಡೆದಿಲ್ಲ. 1 ಸಾವಿರಕ್ಕೂ ಹೆಚ್ಚು ಪ್ರಕರಣವಿರುವ ಅಂದಾಜಿದೆ, 1,270 ವಯಲ್ಸ್ ಸಾಕೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ ಎಂದು ತಾವೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕೆಲಸ ಮಾಡುವ ಬದಲು ಕಣ್ಣೀರು ಸುರಿಸುತ್ತಾರೆ, ನೇಣು ಹಾಕ್ಕೋಬೇಕಾ ಕೇಳ್ತಾರೆ, ನೋಟ್ ಪ್ರಿಂಟ್ ಮಾಡ್ತಿಲ್ಲ ಅಂತಾರೆ, ವಿವಿಧ ಬಗೆಯಲ್ಲಿ ಹತಾಶೆ ವ್ಯಕ್ತಪಡಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಅಂಟಿ ಕುಳಿತಿದ್ದಾದರೂ ಏಕೆ?' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿದೆ.

`ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ, ನೀವು ಕರ್ನಾಟಕದವರೇ, ಫಾರ್ಮಾಸೂಟಿಕಲ್ಸ್ ನಿಮ್ಮದೇ ಖಾತೆ, ಔಷಧ ಪೂರೈಕೆಯ ಅಧಿಕಾರ ನಿಮಗಿದೆ. ಹೀಗಿದ್ದೂ `ಸಾಧ್ಯವಾಗಿಲ್ಲ' ಎಂಬ ಹತಾಶೆಯ ಮಾತಾಡುತ್ತಿದ್ದೀರಲ್ಲ ರಾಜ್ಯದ ಸೋಂಕಿತರು ನೇಣು ಹಾಕಿಕೊಳ್ಬೇಕಾ?! ಲಸಿಕೆ ನೀಡಲೂ ಆಗಲಿಲ್ಲ, ಈಗ ಶಿಲಿಂಧ್ರ ಸೋಂಕಿಗೆ ಔಷಧ ನೀಡಲೂ ನಿಮ್ಮ ಕೈಲಾಗುತ್ತಿಲ್ಲ. ನಿಮಗೇಕೆ ಆ ಹುದ್ದೆ?' ಎಂದು ಡಿ.ಕೆ.ಶಿವಕುಮಾರ್ ಟ್ವಿಟ್ಟರ್‍ನಲ್ಲಿ ಕಿಡಿಕಾರಿದ್ದಾರೆ.
`ತೌಕ್ತೆ ಚಂಡಮಾರುತಕ್ಕೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ನಲುಗಿದ್ದವು. ಮೋದಿಯವರು ಕ್ಷಣವೂ ತಡಮಾಡದೆ ಗುಜರಾತಿಗೆ ತೆರಳಿ, ಸಮೀಕ್ಷೆ ನಡೆಸಿ 1000 ಕೋಟಿ ಕೊಟ್ಟೇಬಿಟ್ಟರು. ಕರ್ನಾಟಕಕ್ಕೆ 2 ಭಾರಿ ನೆರೆ ಬಂದಾಗ ಪ್ರಧಾನಿಯೂ ಬರಲಿಲ್ಲ, ಪರಿಹಾರವೂ ಬರಲಿಲ್ಲ. ಮುತ್ತು ಮಾಣಿಕ್ಯದಂತಹ 25 ಸಂಸದರು ಈ ತಾರತಮ್ಯವನ್ನು ಪ್ರಶ್ನಿಸುವುದಿಲ್ಲವೇ?!' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

`ಮತ್ತೊಮ್ಮೆ ಕೇಂದ್ರ ಸರಕಾರ ಆರ್‍ಬಿಐನಿಂದ 99,122 ಕೋಟಿ ರೂ.ಮಿಗತೆ ಹಣಕ್ಕೆ ಕೈ ಹಾಕಿರುವುದು `ಆತ್ಮ ಬರ್ಬಾದ್' ಯೋಜನೆಯ ಪ್ರತೀಕ! ಸರಕಾರ ಆರ್ಥಿಕ ನಿರ್ವಹಣೆಗೆ ಆರ್‍ಬಿಐ ಜೋಳಿಗೆಗೆ ಕೈ ಹಾಕಬಹುದಾದರೆ ದುಃಸ್ಥಿತಿಯಲ್ಲಿರುವ ಜನತೆಗೆ ಆರ್ಥಿಕ ನೆರವು ನೀಡುತ್ತಿಲ್ಲವೇಕೆ? ಜನರ ಹಣವನ್ನು ಜನತೆಗೆ ನೀಡದೆ `ಸೆಂಟ್ರಲ್ ವಿಸ್ತಾ' ಮಾಡುತ್ತಿರುವುದೇಕೆ?' ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News