×
Ad

ಖ್ಯಾತ ಸಂಶೋಧಕ ಪ್ರೊ.ಎಸ್.ಪಿ. ಮೇಲಕೇರಿ ನಿಧನ

Update: 2021-05-22 21:48 IST

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಕುಲಪತಿ, ಖ್ಯಾತ ಸಂಶೋಧಕ ಪ್ರೊ.ಎಸ್.ಪಿ.ಮೇಲಕೇರಿ(61) ಅವರು ಕೋವಿಡ್‍ನಿಂದ ಕೊನೆಯುಸಿರೆಳೆದಿದ್ದಾರೆ.

ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಇತ್ತೀಚಿಗೆ ನಗರದ ಇಎಸ್‍ಐಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಶನಿವಾರ ನಿಧನರಾದರು.

ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿಗೆ ವಿವಿಯ ಕುಲಪತಿಯಾಗಿದ್ದ ಪ್ರೊ.ಎಸ್.ಆರ್.ನಿರಂಜನ ಅವರ ಅವಧಿ ಮುಗಿದ ಬಳಿಕ ಮೇಲಕೇರಿ ಹಂಗಾಮಿ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸಿಂಗಾಪುರ, ಅಮೆರಿಕ, ಥೈಲ್ಯಾಂಡ್, ಶ್ರೀಲಂಕಾಕ್ಕೆ ತೆರಳಿ ಪ್ರಬಂಧ ಮಂಡಿಸಿದ್ದರು. ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಬುದ್ಧನ ವಿಚಾರಧಾರೆಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಅಸ್ಪೃಶ್ಯತೆಯನ್ನು ಸಾಮಾಜಿಕ ಮನೋವಿಜ್ಞಾನದ ನೆಲೆಯಲ್ಲಿ ಆಳವಾದ ಅಧ್ಯಯನ ನಡೆಸಿದ್ದರು.

ಅಮಾನತು: ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಎಂ.ವಿದ್ಯಾಸಾಗರ ಅವರ ಮೇಲಿನ ಹಲ್ಲೆ ಆರೋಪ ಸಂಬಂಧ ಮೇಲಕೇರಿ ಅವರನ್ನು ಕಳೆದ ಸೆಪ್ಟೆಂಬರ್‍ನಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ಅಮಾನತು ಮಾಡಲಾಗಿತ್ತು.

ಮೇಲಕೇರಿ ಅವರಿಗೆ ತಾಯಿ, ಪತ್ನಿ, ಮೂವರು ಪುತ್ರಿಯರು, ಪುತ್ರ ಇದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News