ರಾಜ್ಯವು ವಿಷಮ ಸ್ಥಿತಿಯಲ್ಲಿದೆ ಎಂದ ಸಚಿವ ಮುರಗೇಶ್ ನಿರಾಣಿ
ಚಾಮರಾಜನಗರ: ಆಕ್ಸಿಜನ್ ಕೊರತೆ ಕೇವಲ ಚಾಮರಾಜನಗರ ಜಿಲ್ಲೆಯಲ್ಲೇ ಅಲ್ಲ, ಬೇರೆ ಕಡೆಯೂ ಸಮಸ್ಯೆ ಇದೆ, ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ಗಣಿಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರ ಜಿಲ್ಲೆಗ ಪ್ರವಾಸ ಕೈಗೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋರೊನ ಮೊದಲನೇ ಅಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಇದ್ದವು, ಆದರೆ ಎರಡನೇ ಅಲೆಯಿಂದ ಸಾಕಷ್ಟು ಪ್ರಮಾಣದಲ್ಲಿ ಸಾವು ನೋವು ಕಂಡಿದ್ದೇವೆ ಎಂದ ಅವರು, ರಾಜ್ಯವು ವಿಷಮ ಸ್ಥಿತಿಯಲ್ಲಿದೆ ಎಂದರು.
ಕಳೆದ ಮೂರು ನಾಲ್ಕು ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಅಂಕಿ ಅಂಶಗಳಿಂದ ತಿಳಿದುಕೊಂಡಿದ್ದು, ಪಟ್ಟಣ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಕೋರೊನ ಸೋಂಕು ಹೆಚ್ಚಾಗುತ್ತಿದೆ ಎನ್ನುವ ಮಾಹಿತಿ ಪಡೆದಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಪ್ರಮಾಣದಲ್ಲಿ ಕೋರೊನ ನಿಯಂತ್ರಣಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸೋಂಕಿತರಿಗೆ ಮೊಬೈಲ್ ಆಕ್ಸಿಜನ್ ಸರಬರಾಜು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ಕೋರೊನ ಮೂರನೇ ಅಲೆ ತಡೆಗಟ್ಟಲು ಎಲ್ಲಾ ಸಿದ್ದತೆಗಳನ್ನು ಸರಕಾರ ಮಾಡಿಕೊಳ್ಳುತ್ತಿದೆ ಎಂದರು.
ಲಾಕ್ ಡೌನ್ ವೇಳೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನದಲ್ಲಿ ತಿರುಗಾಡುವರ ಮೇಲೆ ಎಫ್ ಐ ಆರ್ ದಾಖಲಿಸದಿರಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿಲಾಗಿದೆ ಎಂದ ಸಚಿವ ಮುರಗೇಶ್ ನಿರಾಣಿ, ರಾಜ್ಯದಲ್ಲಿ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ರಾಜ್ಯದಾದ್ಯಂತ ಮರಳು ಲಭ್ಯತೆ ಹಾಗೂ ವಿತರಣೆ ಮಾಡುವ ಬಗ್ಗೆ ಇರುವ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಹೊಸ ಮರಳು ನೀತಿ ಜಾರಿಗೆ ತರುವುದಾಗಿ ಹೇಳಿದರು.