×
Ad

ವಿಜಯೇಂದ್ರ ವಿರುದ್ಧ ಮೊಕದ್ದಮೆ ದಾಖಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ

Update: 2021-05-22 23:05 IST

ಬೆಂಗಳೂರು, ಮೇ 22: `ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಅವರ ವಿರುದ್ಧ ರಾಜ್ಯ ಸರಕಾರ ಕೂಡಲೇ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವ ನಾರಾಯಣ ಇಂದಿಲ್ಲಿ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕು ತಡೆಗೆ ಲಾಕ್‍ಡೌನ್ ಹೇರಲಾಗಿದೆ. ಯಾರೇ ಇದ್ದರೂ ಅನುಮತಿ ಪಡೆದು ಸಂಚಾರ ಮಾಡಬೇಕು. ಆದರೆ, ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಯಾರಿಂದ ಅನುಮತಿ ಪಡೆದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಜನರಿಗೆ ಒಂದು ಕಾನೂನು ಸಿಎಂ ಪುತ್ರನಿಗೆ ಒಂದು ಕಾನೂನು ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಸಮನ್ವಯತೆ ಕೊರತೆ: ರಾಜ್ಯ ಸರಕಾರ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ. ಯಡಿಯೂರಪ್ಪ ಮತ್ತು ಇಪ್ಪತ್ತೈದು ಜನ ಸಂಸದರು ಕೇಂದ್ರದ ವಿರುದ್ದ ಗಟ್ಟಿ ದನಿಯಲ್ಲಿ ಮಾತನಾಡುತ್ತಿಲ್ಲ. ಇದರ ಜೊತೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ಮಧ್ಯೆ ಸಮನ್ವಯತೆ ಇಲ್ಲ ಎಂದು ದೂರಿದರು.

ಆಕ್ಸಿಜನ್ ಇಲ್ಲ: ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಇದೆ ಎಂದು ಹೇಳುತ್ತಾರೆ. ಆದರೆ ಇನ್ನೂ ಆರಂಭವಾಗಿಲ್ಲ. ಡಿಸಿಎಂ ಡಾ.ಅಶ್ಚಥ್ ನಾರಾಯಣ್ ಜಿಲ್ಲೆಗೆ ಬಂದು ಆರು ದಿನದಲ್ಲಿ ಪ್ಲಾಂಟ್ ಆರಂಭ ಎಂದರು. ಇದರ ಬೆನ್ನಿಗೆ ಸಚಿವ ಅರವಿಂದ ಲಿಂಬಾವಳಿ ಬಂದರು ಎಂಟು ದಿನದಲ್ಲಿ ಆರಂಭ ಎಂದರು. ಆದರೆ, ಆಕ್ಷಿಜನ್ ಪ್ಲಾಂಟ್ ಇನ್ನೂ ಆರಂಭವೇ ಆಗಿಲ್ಲ. 40 ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದರೂ ಆಮ್ಲಜನಕ ಇಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News