ಜನರ ತೆರಿಗೆ ಹಣವನ್ನು ಅವರ ಆರೋಗ್ಯಕ್ಕಾಗಿಯೇ ಬಳಸಲು ಮುಂದಾಗಿದ್ದೇವೆ: ಸಿದ್ದರಾಮಯ್ಯ
ಬೆಂಗಳೂರು, ಮೇ 22: ಕಾಂಗ್ರೆಸ್ ಪಕ್ಷವು ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಸರಕಾರದಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಬಿಡುಗಡೆಯಾಗುವ ಹಣವನ್ನೆ ಕ್ರೊಢೀಕರಿಸಿ, ಪಕ್ಷದ ವತಿಯಿಂದ 10 ಕೋಟಿ ರೂ.ಗಳನ್ನು ಒದಗಿಸಿ, ಕೋವಿಡ್ ಲಸಿಕೆ ಖರೀದಿ ಮಾಡಿ ಅಗತ್ಯವಿರುವವರಿಗೆ ಕೊಡಲು ಮುಂದಾಗಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಚಾಮರಾಜಪೇಟೆ ಕ್ಷೇತ್ರದ ಜೆ.ಜೆ.ಆರ್.ನಗರ ವಾರ್ಡ್‍ನಲ್ಲಿರುವ ಬಿಬಿಎಂಪಿ ಸಮುದಾಯ ಭವನದಲ್ಲಿ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಆರಂಭಿಸಿರುವ 80 ಆಕ್ಸಿಜನ್ ಬೆಡ್‍ಗಳ ನಾನ್ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಲಸಿಕೆ ನೀಡಲು ಮುಂದಾಗಿರುವುದಕ್ಕೆ ಟೀಕಿಸುತ್ತಿರುವ ಬಿಜೆಪಿ ನಾಯಕ ಸಿ.ಟಿ.ರವಿ ಟೀಕಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಸರಕಾರ ಕೊಡೋದು ಯಾವ ದುಡ್ಡು ಜನರ ದುಡ್ಡೆ ಅಲ್ಲವೇ? ಜನರ ದುಡ್ಡನ್ನು ಸಾರ್ವಜನಿಕ ಪ್ರತಿನಿಧಿಗಳಾಗಿ ಅವರ ಆರೋಗ್ಯ ರಕ್ಷಣೆಗೆ ವಿವೇಚನೆಯಿಂದಲೇ ಬಳಲು ಮುಂದಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಶಾಸಕರ ಪ್ರದೇಶಾಭಿವೃದ್ಧಿಗೆ ಹಣವನ್ನು ಬಿಜೆಪಿಯವರಾಗಲಿ, ಸಿ.ಟಿ.ರವಿ, ಯಡಿಯೂರಪ್ಪ ತಮ್ಮ ಮನೆಯಿಂದ ದುಡ್ಡು ಕೊಡಲ್ಲ. ಜನರ ತೆರಿಗೆ ಹಣವನ್ನೆ ಕೊಡೋದು. ಈ ಸಂಕಷ್ಟದ ಸಮಯದಲ್ಲಿ ನಾವು 100 ಕೋಟಿ ರೂ.ಗಳನ್ನು ನೀಡಿ ಲಸಿಕೆ ಕೊಂಡುಕೊಂಡು ಅಗತ್ಯ ಇರುವವರಿಗೆ ಕೊಡುತ್ತಿದ್ದೇವೆ. ಇದಕ್ಕಾಗಿ ಜನರ ತೆರಿಗೆ ಹಣವನ್ನೆ ಬಳಸುತ್ತಿರುವುದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕೋವಿಡ್ ಎರಡನೆ ಅಲೆ ಬರುತ್ತೆ ಎಂದು ನ.30ರಂದೆ ತಜ್ಞರು ಸರಕಾರಕ್ಕೆ ತಿಳಿಸಿದ್ದಾರೆ. ಸರಕಾರ ಲಸಿಕೆಯ ಸಿದ್ಧತೆ ಯಾಕೆ ಮಾಡಿಕೊಂಡಿಲ್ಲ. ಲಸಿಕೆ ಖರೀದಿಗೆ ಯಾಕೆ ಮುಂದಾಗಿಲ್ಲ. ಕೋವಿಡ್ ಸೋಂಕಿನಿಂದ ಸಾವಿರಾರು ಜನ ಯಾಕೆ ಸತ್ತಿದ್ದಾರೆ. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತರು ಅದಕ್ಕೆ ಯಾರು ಜವಾಬ್ದಾರರು? ಸಿ.ಟಿ.ರವಿ ಇದಕ್ಕೆ ಉತ್ತರ ಕೊಡುತ್ತಾರಾ? ಸರಕಾರ ಇದಕ್ಕೆ ಜವಾಬ್ದಾರಿ. ಸಕಾಲಕ್ಕೆ ಆಸ್ಪತ್ರೆಗೆ ಆಕ್ಸಿಜನ್ ಕೊಡಲು ಸಾಧ್ಯವಾಗಿಲ್ಲ. ಅದರಿಂದ ಜನ ಸತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಆಸ್ಪತ್ರೆಗಳಿಗೆ ಆಕ್ಸಿಜನ್ ಸೇರಿದಂತೆ ಅಗತ್ಯ ವೈದ್ಯಕೀಯ ನೆರವು ಒದಗಿಸುವುದು ಸರಕಾರದ ಜವಾಬ್ದಾರಿ. ಸಿದ್ದರಾಮಯ್ಯ ಜವಾಬ್ದಾರಿ ಅಲ್ಲ. ಕಾಂಗ್ರೆಸ್ ಪಕ್ಷದ ಆರಂಭದಿಂದಲೂ ಜನರ ಪರವಾಗಿ, ಬಡವರ ಪರವಾಗಿ ಇರುವುದು. ಬಡವರಿಗೆ ಸಹಾಯ ಮಾಡುತ್ತಿರುವುದು. ಬಿಜೆಪಿಯವರು ಈ ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾವಲ್ಲ. ಬೆಡ್ ಬ್ಲಾಕಿಂಗ್‍ನಲ್ಲಿ ರಾಜಕಾರಣ ಮಾಡಿದ್ದು ಎಲ್ಲರ ಮುಂದಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಝಮೀರ್ ಕಾರ್ಯವೈಖರಿಗೆ ಮೆಚ್ಚುಗೆ: ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಈ ಕೊರೋನ ಸಾಂಕ್ರಮಿಕದ ವಿರುದ್ಧದದ ಹೋರಾಟದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊರೋನ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಈ ಹಿಂದೆಯೂ ಕೋವಿಡ್ ಸೋಂಕಿತರಿಗೆ ಸಹಾಯ ಹಸ್ತ ಚಾಚಿದ್ದರು. ಬಿಬಿಎಂಪಿ ಸಮುದಾಯ ಭವನದಲ್ಲಿ ನಾನ್ ಕೋವಿಡ್ ಸೆಂಟರ್ ಆರಂಭಿಸಲಾಗಿದ್ದು, ಇಲ್ಲಿ ಪ್ರತಿಯೊಬ್ಬ ರೋಗಿಗೂ ತಪಾಸಣೆ ಮಾಡಿ, ಔಷಧಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಜೊತೆಗೆ ರೋಗಿಗಳೀಗೆ ಆಹಾರ, ಹಣ್ಣು, ಹಂಪಲುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಸಾವಿರಾರು ಕುಟುಂಬಗಳಿಗೆ ತಲಾ 20 ಕೆ.ಜಿ.ಯಷ್ಟು ದಿನಸಿ ಕಿಟ್‍ಗಳನ್ನು ನೀಡಿದ್ದಾರೆ. ಕೋವಿಡ್ ವಾರಿಯರ್ಸ್‍ಗಳಾದ ವೈದ್ಯರು, ಆಶಾ ಕಾರ್ಯಕರ್ತೆಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಸಿವಿಲ್ ಡೆಫೆನ್ಸ್, ಪೌರ ಕಾರ್ಮಿಕರಿಗೆ ದಿನಸಿ ಕಿಟ್‍ಗಳೊಂದಿಗೆ ತಲಾ 5 ಸಾವಿರ ರೂ.ನಗದು ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಚಾಮರಾಜಪೇಟೆಗೆ ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಮಾಡಿರುವ ಟ್ವಿಟ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ವಿಚಾರಗಳನ್ನು ನಾನು ಮಾತನಾಡಲ್ಲ. ಕೊರೋನ ಕೇವಲ ಚಾಮರಾಜಪೇಟೆ ಕ್ಷೇತ್ರಕ್ಕೆ ಮಾತ್ರ ಬಂದಿದೆಯೇ? ಇಡೀ ಜಗತ್ತಿನಲ್ಲಿ ಬಂದಿದೆ. ಝಮೀರ್ ಇಲ್ಲಿ ಆಸ್ಪತ್ರೆ ಮಾಡಿದ್ದಾರೆ ಅದರ ಉದ್ಘಾಟನೆಗೆ ಬಂದಿದ್ದೇನೆ. ನಾನು ಕೇವಲ ಚಾಮರಾಜಪೇಟೆ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಪುಲಿಕೇಶಿನಗರ, ಬಸವನಗುಡಿ, ಕೆಜಿಎಫ್, ಮಾಲೂರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಹೋಗುತ್ತಿದ್ದೇನೆ. ನಾಳೆ ಹೆಬ್ಬಾಳಕ್ಕೂ ಹೋಗುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಕಳೆದ ಬಾರಿಗಿಂತ ಈ ಬಾರಿ ಜನ ಕೋವಿಡ್‍ನ ಭಯದಿಂದ ಸತ್ತಿದ್ದಾರೆ. ಜನ ಬೀದಿಯಲ್ಲಿ ಸಾಯುತ್ತಿದ್ದಾರೆ. ಆಕ್ಸಿಜನ್, ಐಸಿಯು ಬೆಡ್‍ಗಳು ಸಿಗುತಿಲ್ಲ. ಆದುದರಿಂದ, ನಾನು ಹಾಗೂ ನಮ್ಮ ಕ್ಷೇತ್ರದ ಮುಖಂಡರು 80 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಿದ್ದೇವೆ. ಬಿಬಿಎಂಪಿ ವತಿಯಿಂದ ವೈದ್ಯರನ್ನು ನೇಮಕ ಮಾಡಲಾಗಿದೆ. ನಾವು 7 ಜನ ಖಾಸಗಿ ವೈದ್ಯರನ್ನು ನೇಮಕ ಮಾಡಿದ್ದೇವೆ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
80 ಹಾಸಿಗೆಗಳ ಪೈಕಿ 30 ಹಾಸಿಗೆಗಳನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ಮಲಿಕ್ ಬೇಗ್ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ವೈದ್ಯರು, ಔಷಧ, ಆಕ್ಸಿಜನ್, 10 ಕಾನ್ಸಂಟ್ರೇಟರ್, ಊಟದ ವ್ಯವಸ್ಥೆ, ಇಸಿಜಿ, ಎಕ್ಸ್‍ರೇ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಕೋವಿಡ್ ಟೆಸ್ಟಿಂಗ್ ಸೆಂಟರ್ ಇಲ್ಲಿ ಆರಂಭವಾಗಲಿದೆ. ಯಾರಾದರೂ ಪಾಸಿಟಿವ್ ಬಂದರೆ, ಬಾಬು ಜಗಜೀವನ್‍ರಾಮ್ ನಗರದಲ್ಲಿ ಆರಂಭಿಸಲಾಗಿರುವ 32 ಹಾಸಿಗೆಗಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಇನ್ನು ನಾಲ್ಕೈದು ದಿನಗಳಲ್ಲಿ ಅಲ್ಲಿ 8 ಐಸಿಯು ಬೆಡ್‍ಗಳು ಬರಲಿವೆ. ಕೇವಲ ನಮ್ಮ ಕ್ಷೇತ್ರದವರಷ್ಟೇ ಅಲ್ಲ, ಎಲ್ಲ ಬಡವರೂ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಬಿಬಿಎಂಪಿ ಜಂಟಿ ಆಯುಕ್ತ(ಪಶ್ಚಿಮ) ಶಿವಸ್ವಾಮಿ, ಬಿಬಿಎಂಪಿ ಅಧಿಕಾರಿಗಳಾದ ಡಾ.ನಾಸೀರ್, ಡಾ.ಸುಫಿಯಾನ್, ಕಾಂಗ್ರೆಸ್ ನಾಯಕರಾದ ಬಿ.ಕೆ.ಅಲ್ತಾಫ್ ಖಾನ್, ಮಲೀಕ್ ಬೇಗ್, ಅಜ್ಮಲ್ ಬೇಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.