ಅಂಬಾನಿ, ಅದಾನಿಯಂತಹ ಶ್ರೀಮಂತರ ಸಂಪತ್ತನ್ನು ಲಸಿಕೆ ಉತ್ಪಾದನೆಗೆ ಖರ್ಚು ಮಾಡಲಿ: ಪುಷ್ಪಾ ಅಮರನಾಥ್

Update: 2021-05-23 14:23 GMT

ಬೆಂಗಳೂರು, ಮೇ 23: ಕೋವಿಡ್ ಮೂರನೆ ಅಲೆಯು ಎರಡನೆಯದಕ್ಕಿಂತಲೂ ಬಲಶಾಲಿಯಾಗಿದೆ ಮತ್ತು ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಕೆಲವು ಊಹಾಪೋಹಗಳಿವೆ. ನಮ್ಮ ಭವಿಷ್ಯದ ಪೀಳಿಗೆಯನ್ನು ಮತ್ತು ಭಾರತದ ಅಮೂಲ್ಯ ಮಕ್ಕಳನ್ನು ರಕ್ಷಿಸುವ ಏಕೈಕ ಮಾರ್ಗವೆಂದರೆ ರಕ್ಷಣೆಯನ್ನು ನೀಡುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕೋವಿಡ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಏಕೈಕ ತಕ್ಷಣದ ಕ್ರಮವೆಂದರೆ ಲಸಿಕೆ ನೀಡುವುದು. ಲಸಿಕೆಯ ಸಾಕಷ್ಟು ಉತ್ಪಾದನೆ ಇದೆ ಎಂದು ದೇಶವು ಖಚಿತಪಡಿಸಿಕೊಂಡರೆ ಮತ್ತು ಅದನ್ನು ತಕ್ಷಣವೆ ಎಲ್ಲರಿಗೂ ನೀಡಿದರೆ ಮಾತ್ರ ಇದನ್ನು ಸಾಧಿಸಬಹುದು ಎಂದು ತಿಳಿಸಿದ್ದಾರೆ.

ರಾಜ್ಯವು ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ. ಆದುದರಿಂದ, ತೆರಿಗೆ ಹಣದಿಂದ ಲಸಿಕೆಯನ್ನು ಹೆಚ್ಚಿಸಬೇಕು. ಲಸಿಕೆ ತಯಾರಿಕೆ ಮತ್ತು ಲಸಿಕಾಕರಣ ಅಭಿಯಾನಗಳಿಗೆ ಹಣವನ್ನು ಒದಗಿಸಲು ತಮ್ಮಲ್ಲಿ ಕೈ ಮುಗಿದು ವಿನಂತಿಸಿಕೊಳ್ಳುತ್ತೇನೆ. ನಾವು ಎಲ್ಲ ಮಕ್ಕಳಿಗೆ ಲಸಿಕೆ ನೀಡಿದ್ದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು. ಅಂಬಾನಿ ಮತ್ತು ಅದಾನಿಯಂತಹ ದೇಶದ ಶ್ರೀಮಂತ ಜನರ ತಮ್ಮ ಸಂಪತ್ತನ್ನು ಲಸಿಕೆ ಉತ್ಪಾದನೆಗೆ ಖರ್ಚು ಮಾಡಲು ಮುಂದಾಗಬೇಕು ಎಂದು ಪುಷ್ಪಾ ಅಮರನಾಥ್ ಸಲಹೆ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ದೇಶವು ಪ್ರತಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ಒಂದು ತಿಂಗಳೊಳಗೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸಬೇಕು. ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ದೇಶವು ಆರೋಗ್ಯ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ನಿಟ್ಟಿನಲ್ಲಿ ಮತ್ತಷ್ಟು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ಎಲ್ಲ ತಾಯಂದಿರ ಪರವಾಗಿ ನಮ್ಮ ಮಕ್ಕಳನ್ನು ರಕ್ಷಿಸಲು ತಮ್ಮಲ್ಲಿ ಕೈ ಮುಗಿದು ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News