×
Ad

ಕೋವಿಡ್ ನಿಂದ ತಂದೆ ಮೃತ್ಯು: 'ಶವ ನೀವೇ ಅಂತ್ಯಕ್ರಿಯೆ ಮಾಡಿಬಿಡಿ, ಹಣ ತಂದು ಕೊಡಿ' ಎಂದ ಪುತ್ರ !

Update: 2021-05-23 22:06 IST

ಮೈಸೂರು,ಮೇ.23: ಕೋವಿಡ್‍ನಿಂದ ಮೃತ ಪಟ್ಟ ತಂದೆ ಮುಖ ನೋಡಲು ಬಾರದ ಮಗ ಅವರು ದುಡಿದ ಹಣ ಮಾತ್ರ ಬೇಕು ಎಂದ ಅಮಾನವೀಯ ಘಟನೆ ಮೈಸೂರಿನ ಹೆಬ್ಬಾಳದಲ್ಲಿ ನಡೆದಿದೆ.

ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ನಿವಾಸಿ ಆದರ್ಶ್ ಎಂಬುವವರು ಕೊರೋನ ಸೋಂಕಿನಿಂದ ಸಾವೀಗೀಡಾಗಿದ್ದಾರೆ. ಅವರ ಶವವನ್ನು ಕುಟುಂಬದವರಿಗೆ ತಲುಪಿಸಲು ಸ್ಥಳೀಯ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ದೂರವಾಣಿ ಮೂಲಕ ಅವರ ಮಗನನ್ನು ಸಂಪರ್ಕ ಮಾಡಿದ್ದಾರೆ. ಕರೆ ಸ್ವೀಕರಿಸಿದ ಪುತ್ರ 'ಅವರು ಕೊರೋನದಿಂದ ಸಾವನ್ನಪ್ಪಿದ್ದಾರೆ, ನಾನು ಬರಲು ಆಗುವುದಿಲ್ಲ, ನಮ್ಮ ತಂದೆ ಶವ ಬೇಡ ನೀವೆ ಅಂತ್ಯಕ್ರಿಯೆ ಮಾಡಿಬಿಡಿ' ಎಂದಿದ್ದಾನೆ. ಅದಕ್ಕೆ ಪಾಲಿಕೆ ಸದಸ್ಯ ಶ್ರೀಧರ್ ಆಯ್ತು ನಿಮ್ಮ ತಂದೆ ಬಳಿ ಎಟಿಎಂ ಕಾರ್ಡ್ ಮತ್ತು 6 ಲಕ್ಷ ರೂ. ಹಣ ಇದೆ ಎಂದು ಹೇಳಿದ್ದಾರೆ. ಅದಕ್ಕೆ ಅವನು ಎಟಿಎಂ ಕಾರ್ಡ್ ಮತ್ತು 6 ಲಕ್ಷ ರೂ. ಹಣವನ್ನು ಕುವೆಂಪು ನಗರಕ್ಕೆ ತಂದು ಕೊಡಿ ನಾನು ಸಿಗುತ್ತೇನೆ ಎಂದಿದ್ದಾನೆ.

ಮುಂದುವರಿದು ಮಾತನಾಡಿದ ಶ್ರೀಧರ್, ನಿಮ್ಮ ತಂದೆಯ ಬಟ್ಟೆ, ಕೆಲವು ಸಾಮಾನುಗಳಿವೆಯಲ್ಲ ಎಂದಿದ್ದಕ್ಕೆ, ಬಟ್ಟೆಗಳನ್ನು ಯಾರಿಗಾದರೂ ಕೊಟ್ಟುಬಿಡಿ, ಮನೆ ಖಾಲಿ ಮಾಡಿ ಅಲ್ಲಿರುವ ಸಾಮಾನುಗಳನ್ನು ತಂದುಕೊಡಿ ನಿಮಗೆ ಹಣ ನೀಡುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪಾಲಿಕೆ ಸದಸ್ಯ ಶ್ರೀಧರ್, ನಿನಗೆ ಮಾನ ಮರ್ಯಾದೆ ಇದೆಯೇ. ಹೆತ್ತ ತಂದೆ ಮುಖ ನೋಡಲು ಬರಲ್ಲ ಎನ್ನುತ್ತೀಯ, ಹಣ ಮಾತ್ರ ಬೇಕ ನಿನಗೆ, ನಿಮಗೆ ಮಾನವೀಯತೆ ಇದೆಯೇ ಎಂದು ಹೇಳುತ್ತಿದ್ದಂತೆಯೇ ಆತ ಪೋನ್ ಕರೆ ಕಟ್ ಮಾಡಿದ್ದಾನೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News