×
Ad

ಜನ ಸಾಯುತ್ತಿದ್ದಾರೆ, ದಯವಿಟ್ಟು ಅವರಿಗೆ ಬೆಡ್ ವ್ಯವಸ್ಥೆ ಮಾಡಿ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್

Update: 2021-05-23 22:30 IST

ಮೈಸೂರು,ಮೇ.23: ಬ್ಲಾಕ್ ಫಂಗಸ್ ಗೆ ತುತ್ತಾದವರಿಗೆ ಬೆಡ್ ಸಿಗದೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆ ಮುಂಭಾಗ ಮಲಗಿದ್ದಾರೆ, ಕ್ರಮ ಕೈಗೊಳ್ಳಬೇಕಾದ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಆರೋಗ್ಯ ಸಚಿವರು ನಿದ್ದೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳೆ ನೀವು ಏನು ಮಾಡುತ್ತಿದ್ದೀರಿ, ಜನ ಸಾಯುತ್ತಿದ್ದಾರೆ ದಯವಿಟ್ಟು ಅವರಿಗೊಂದು  ಬೆಡ್ ವ್ಯವಸ್ಥೆ ಮಾಡಿ ಎಂದು  ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಸರ್ಕಾರವನ್ನು ಬೇಡಿಕೊಂಡರು.

ನಗರದ ಕಾಂಗ್ರಸ್ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಗೆ ಒಳಗಾದವರು ಬೆಡ್ ಇಲ್ಲದೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯ ಮುಂದೆ ಮಲಗಿದ್ದಾರೆ. ದೇವದುರ್ಗದ ಶಿವಪ್ಪ ಎಂಬ ವ್ಯಕ್ತಿ ಶನಿವಾರ ರಾತ್ರಿಯಿಂದಲೂ ಬೆಡ್ ಸಿಗದೆ ಆಸ್ಪತ್ರೆ ಮುಂದೆ ಮಲಗಿದ್ದಾರೆ. ಎಷ್ಟು ಪ್ರಯತ್ನಪಟ್ಟರೂ ಬೆಡ್ ಸಿಗುತ್ತಿಲ್ಲ, ಅವರಿಗೆ ಸೂಕ್ತ ಚಿಕಿತ್ಸೆಯೂ ದೊರೆಯುತ್ತಿಲ್ಲ, ಹಿಂಗಾದರೆ ಜನರು ಹೇಗೆ ಬದುಕುವುದು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳೇ ದಯಮಾಡಿ ಸಂಕಷ್ಟಕ್ಕೊಳಗಾದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿ. ನಾವು ಈ ಸಮಯದಲ್ಲಿ ರಾಜಕೀಯ ಮಾಡುವುದಿಲ್ಲ, ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು ಸಮರ್ಪಕ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಿ ಎಂದು ಕೈಮುಗಿದು ಮನವಿ ಮಾಡಿದರು.

ಕೊರೋನ ಸೋಂಕಿಗೆ ಒಳಗಾದವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಲು ಹೇಳುತ್ತೀರಿ, ಸ್ಯಾಚುರೇಷನ್ ಕಡಿಮೆಯಾದರೆ ಆಸ್ಪತ್ರಗೆ ಬನ್ನಿ ಎನ್ನುತ್ತೀರಿ, ಅವರಿಗೇನು ಆಕ್ಸಿಮೀಟರ್ ಕೊಟ್ಟಿದ್ದೀರ? ಬಡವರು ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ನಿಂದ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜನ ಸಾಯುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲವೂ ಸರಿಯಾಗಿದೆ ಎಂದು ಸುಳ್ಳುಗಳನ್ನೇ ಹೇಳುತ್ತಿದೆ ಎಂದು ಹರಿಹಾಯ್ದರು.

ಪ್ರಧಾನಿಗೆ ಪತ್ರ: ಕೊರೋನ ಮೂರನೇ ಅಲೆ ಆಗಸ್ಟ್ ನಲ್ಲಿ ಬರಲಿದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಈ ಅಲೆ ಸಣ್ಣ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಆ ಮಕ್ಕಳ ರೋಗ ನಿರೋಧ ಶಕ್ತಿ ಹೆಚ್ವಿಸಲು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದಾಗಿ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.

ಲಾಕ್ ಡೌನ ನಿಂದಾಗಿ ಕೆಲಸವಿಲ್ಲದೆ ಜನ ಕಂಗಾಲಾಗಿದ್ದಾರೆ. ನೀವು ಕೊಡುವ ಅಕ್ಕಿಯಿಂದ ಅವರ ಹೊಟ್ಟೆ ತುಂಬುತ್ತಿಲ್ಲ. ಸರಿಯಾದ ಊಟ ತಿಂಡಿ ಇಲ್ಲದೆ ಮಕ್ಕಳ ಆರೋಗ್ಯದ ಮೇಲೆ ಪರುಣಾಮ ಬೀರುತ್ತಿದೆ. ದಯವಿಟ್ಟು ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ವಿಸಲು ಆಯುರ್ವೇದದ ಚವನ್ ಪ್ರಾಶ್ ನೀಡಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News