ಪಶು ವೈದ್ಯರು, ಸಿಬ್ಬಂದಿಯನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ: ಪಶು ವೈದ್ಯಾಧಿಕಾರಿಗಳ ಸಂಘ
ಬೆಂಗಳೂರು, ಮೇ 23: ಪಶು ವೈದ್ಯರು, ಸಿಬ್ಬಂದಿಯನ್ನು ಕೇಂದ್ರ ಸರಕಾರ ಕೊರೋನ ವಾರಿಯರ್ಸ್ ಎಂದು ಪರಿಗಣಿಸಿದೆ. ಒಡಿಶಾ ಮತ್ತು ಆಂಧ್ರ ಸರಕಾರಗಳು ಪಶು ವೈದ್ಯರನ್ನು ಕೊರೋನಾ ವಾರಿಯರ್ಸ್ ಎಂದು ಎಲ್ಲ ಸವಲತ್ತುಗಳನ್ನು ನೀಡುತ್ತಿದೆ. ರಾಜ್ಯ ಸರಕಾರವು ಪಶು ವೈದ್ಯರು ಸಿಬ್ಬಂದಿಯನ್ನು ವಾರಿಯರ್ಸ್ ಎಂದು ಪರಿಗಣಿಸಿ ಸೂಕ್ತ ಭದ್ರತೆ ಮತ್ತು ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ಪಶು ವೈದ್ಯಾಧರಿಕಾರಿಗಳ ಸಂಘ ಒತ್ತಾಯಿಸಿದೆ.
ಭೀಕರವಾಗಿರುವ ಕೊರೋನ ಎರಡನೇ ಅಲೆಯ ನಡುವೆಯೂ ಜೀವ ಲೆಕ್ಕಿಸದೇ ಪಶು ವೈದ್ಯಾಧಿಕಾರಿಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಮಂದಿ ಸೋಂಕಿಗೆ ಒಳಗಾಗಿ ಪ್ರಾಣ ಹಾನಿಗೊಳಗಾಗಿದ್ದರೂ ಕರ್ತವ್ಯ ಪ್ರಜ್ಞೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಜತೆಗೆ ಪಶು ಆಸ್ಪತ್ರೆಗಳ ಜತೆಗೆ ಮನೆ ಮನೆಗೆ ತೆರಳಿ ಸೇವೆ ಸಲ್ಲಿಸುತ್ತಿದ್ದೇವೆ. ಅಲೋಪತಿ ವೈದ್ಯರಂತೆ ನಮ್ಮನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸದಿದ್ದರೆ ಮನೆ-ಮನೆ ಸೇವೆ ಸ್ಥಗಿತಗೊಳಿಸುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎಲ್ಲ ಚಟುವಟಿಕೆ ನಿಂತರೂ ಕೃಷಿ ಕೆಲಸ ಅಬಾಧಿತವಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ಅತಿಹೆಚ್ಚು ಕೃಷಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಜಿಡಿಪಿಗೆ ಅತ್ಯುತ್ತಮ ಕೊಡುಗೆ ನೀಡಿದೆ. ಕೃಷಿಕರಿಗೆ ಬೆನ್ನೆಲುಬಾಗಿ ಪಶು ವೈದ್ಯಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ರೈತರ ಆದಾಯ ಮೂಲವಾಗಿರುವ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ನಮ್ಮ ನೆರವು ಮುಂದುವರಿದಿದ್ದು, ದೇಶ ಮತ್ತು ರೈತರ ಆದಾಯ ಹೆಚ್ಚಳದಲ್ಲಿ ನಮ್ಮ ಪಾತ್ರವೂ ಗಣನೀಯವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶಿವರಾಮ ತಿಳಿಸಿದ್ದಾರೆ.
ಪಶುವೈದ್ಯರು ಆರೋಗ್ಯ ಇಲಾಖೆ ವೈದ್ಯರಂತೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜತೆಗೆ ಹೆಚ್ಚುವರಿಯಾಗಿ ಕೋವಿಡ್-19 ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ, ನಮ್ಮನ್ನು ಅವಶ್ಯಕ ಸೇವೆ ಎಂದು ಪರಿಗಣಿಸಿಲ್ಲ. ಗ್ರಾಮೀಣ ಭಾಗದಲ್ಲಿ ನಮ್ಮ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮನ್ನು ಕೊರೋನ ಸೇನಾನಿಗಳು ಎಂದು ಪರಿಗಣಿಸಿ ಆದ್ಯತೆ ಮೇಲೆ ಲಸಿಕೆ, ಸುರಕ್ಷತಾ ಸಾಧನಗಳು, ಪರಿಹಾರ ಒದಗಿಸಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ಸುಮಾರು 40 ಪಶುವೈದ್ಯರನ್ನು ಶವಗಾರದ ಕರ್ತವ್ಯಕ್ಕೆ ನಿಯೋಜಿಸಿದ್ದು, ಇವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನಮ್ಮ ಸೇವೆಯನ್ನು ಕೃಷಿಕರ ಸೇವೆಗೆ ಬಳಸಿಕೊಳ್ಳುವ ಉದ್ದೇಶದಿಂದ ಶವಗಾರಕ್ಕೆ ನಿಯೋಜಿಸಿರುವ ಪಶುವೈದ್ಯರನ್ನು ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಶಿಕ್ಷಕರು, ಕೆಇಬಿ ಲೈನ್‍ಮೆನ್‍ಗಳು, ಅಡುಗೆ ಅನಿಲ ವಿತರಿಸುವ ಸಿಬ್ಬಂದಿಗಳನ್ನು ಕೊರೋನ ಸೇನಾನಿಗಳು ಎಂದು ಘೋಷಿಸಿದೆ. ಆದರೆ, ಹಗಲಿರುಳು ಮನೆ ಬಾಗಿಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯರು, ಸಿಬ್ಬಂದಿ ಸೇವೆಯನ್ನು ಕಡೆಗಣಿಸಿರುವುದು ದುರದೃಷ್ಟಕರ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸದಿದ್ದರೆ ಪಶುಚಿಕಿತ್ಸಾಲಯಗಳಲ್ಲಿ ನೀಡುವ ತುರ್ತು ಸೇವೆಯನ್ನು ಹೊರತು ಪಡಿಸಿ ಜಾನುವಾರು ಲಸಿಕೆ ಸೇರಿದಂತೆ ರೈತರ ಮನೆ ಬಾಗಿಲಿಗೆ ನೀಡುವ ಎಲ್ಲ ಸೇವೆಯನ್ನು, ಕೋವಿಡ್-19 ಸೋಂಕು ಮುಗಿಯುವ ತನಕ ಸ್ಥಗಿತಗೊಳಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸುರೇಶ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.