ಕರ್ನಾಟಕಕ್ಕೆ ಇನ್ನೊಂದು ವಾರದಲ್ಲಿ ನೈರುತ್ಯ ಮುಂಗಾರು ಆಗಮನ ಸಾಧ್ಯತೆ: ವಿ.ಎಸ್.ಪ್ರಕಾಶ್

Update: 2021-05-23 17:26 GMT

ಬೆಂಗಳೂರು, ಮೇ 23: ನೈರುತ್ಯ ಮುಂಗಾರು ಇನ್ನೊಂದು ವಾರದಲ್ಲಿ ಆಗಮನವಾಗುವ ಮುನ್ಸೂಚನೆಗಳಿದ್ದು, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಯಾಸ್ ಚಂಡಮಾರುತದ ಬೆನ್ನಲ್ಲೇ ಮುಂಗಾರು ಆರಂಭವಾಗಲಿದೆ. ಅಂದರೆ, ಮೇ ತಿಂಗಳ ಅಂತ್ಯದಲ್ಲಿ ಕೇರಳ ಹಾಗೂ ರಾಜ್ಯದ ಕರಾವಳಿಯನ್ನು ಮುಂಗಾರು ಪ್ರವೇಶಿಸುವ ಮುನ್ಸೂಚನೆಗಳಿವೆ ಎಂದು ತಿಳಿಸಿದರು.

ವಾಡಿಕೆಯಂತೆ ಜೂನ್ ನಲ್ಲಿ ಮುಂಗಾರು ಆರಂಭವಾಗಿತ್ತದೆ. ಆದರೆ, ಈ ಭಾರಿ ಎರಡು ಮೂರು ದಿನ ಮುಂಚೆ ಆರಂಭವಾಗುವ ಸಾಧ್ಯತೆಗಳಿವೆ. ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸಲಿದೆ. ಈ ಭಾರಿಯೂ ಮುಂಗಾರಿನ ಆರಂಭದಲ್ಲಿ ಕೊಡಗು, ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸೂಚನೆಗಳಿವೆ ಎಂದು ಹೇಳಿದರು.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 24ರಂದು ಚಂಡ ಮಾರುತವಾಗಿ ಮಾರ್ಪಡಲಿದೆ. ಅದಕ್ಕೆ ಯಾಸ್ ಎಂದು ನಾಮಕರಣ ಮಾಡಲಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ತೌಕ್ತೆ ಚಂಡ ಮಾರುತದ ಗಾಳಿ ಹೆಚ್ಚಾಗಿತ್ತು. ಯಾಸ್ ಚಂಡಮಾರುತದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಗಳು ಇವೆ ಎಂದು ಹೇಳಿದರು.

ಚಂಡಮಾರುತವು ಒಡಿಸ್ಸಾ ಕಡೆಗೆ ಆಂಧ್ರಪ್ರದೇಶದ ಕರಾವಳಿ ಸವರಿಕೊಂಡು ಹೋಗುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯದ ಮೇಲೆ ಅದರ ಪರಿಣಾಮವಿಲ್ಲ. ಮೇ 26ರಂದು ಒಡಿಸ್ಸಾ ಕರಾವಳಿಯಲ್ಲಿ ಭೂಸ್ಪರ್ಶವಾಗುವ ಸಂಭವವಿದೆ. ಆದರೆ, ಹೆಚ್ಚು ಮಳೆ ಸುರಿಯುವ ಮುನ್ಸೂಚನೆಗಳಿವೆ ಎಂದರು.

ಯಾಸ್ ಚಂಡಮಾರುತದ ನೇರ ಪರಿಣಾಮ ರಾಜ್ಯದ ಮೇಲೆ ಉಂಟಾಗುವುದಿಲ್ಲ. ಅದರ ಪರೋಕ್ಷ ಪರಿಣಾಮದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ನಿರೀಕ್ಷಿಸಬಹುದು ಎಂದು ತಿಳಿಸಿದರು.

ಈಗಾಗಲೇ ರಾಜ್ಯದ ಒಳನಾಡಿನಲ್ಲೂ ಚದುರಿದಂತೆ ಮಳೆಯಾಗುತ್ತಿದ್ದು, ಇದೇ ರೀತಿ ಮುಂದುವರೆಯಲಿದೆ. ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಬಲವಾದ ಮೇಲ್ಮೈ ಗಾಳಿ ಬೀಸುತ್ತಿದೆ. ಸಂಜೆ ಹಾಗೂ ರಾತ್ರಿ ವೇಳೆ ಚದುರಿದಂತೆ ಅಲ್ಲಲ್ಲಿ ಗುಡುಗು, ಮಿಂಚಿನ ವಾತಾವರಣ ಹಲವೆಡೆ ಕಂಡು ಬರಲಿದೆ ಕೆಲವೆಡೆ ಮಳೆಯಾಗಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News