ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಗೋಣಿಬೀಡು ಪಿಎಸ್ಸೈ ಅರ್ಜುನ್ ಅಮಾನತು

Update: 2021-05-23 17:43 GMT
ಪಿಎಸ್ಸೈ ಅರ್ಜುನ್

ಚಿಕ್ಕಮಗಳೂರು, ಮೇ 23: ದಲಿತ ಯುವಕನಿಗೆ ಗೋಣಿಬೀಡು ಠಾಣಾಧಿಕಾರಿ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಐಜಿ ಅವರ ಆದೇಶದ ಮೇರೆಗೆ ಪಿಎಸ್ಸೈ ಅರ್ಜುನ್ ಅವರನ್ನು ಅಮಾನತು ಮಾಡಲಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್.ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ದಲಿತ ಯುವಕನನ್ನು ಪ್ರಕರಣವೊಂದರಲ್ಲಿ ಠಾಣೆಗೆ ಕರೆಸಿಕೊಂಡ ಗೋಣಿಬೀಡು ಠಾಣಾಧಿಕಾರಿ ಅರ್ಜುನ್, ಯುವಕನಿಗೆ ಹಲ್ಲೆ ಮಾಡಿದ್ದಲ್ಲದೇ ಠಾಣೆಯಲ್ಲಿದ್ದ ಆರೋಪಿಯೊಬ್ಬನ ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿದ್ದಾರೆಂದು ಯುವಕ ದೂರು ನೀಡಿದ್ದ. ದೂರಿನ ಮೇರೆಗೆ ಗೋಣಿಬೀಡು ಠಾಣೆಯಲ್ಲಿ ಪಿಎಸ್ಸೈ ಅರ್ಜುನ್ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪಿಎಸ್ಸೈ ಅರ್ಜುನ್ ಅವರನ್ನು ಗೋಣಿಬೀಡು ಠಾಣೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿ, ತರೀಕೆರೆ ಡಿವೈಎಸ್ಪಿ ಅವರಿಂದ ಇಲಾಖಾ ತನಿಖೆ ಕೈಗೊಳ್ಳಲಾಗಿತ್ತು. ಈ ಮಧ್ಯೆ ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಐಜಿ ಅವರು ಪಿಎಸ್ಸೈ ಅರ್ಜುನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿರುವ ಅವರು, ಆರೋಪಿ ಸ್ಥಾನದಲ್ಲಿರುವ ಪಿಎಸ್ಸೈ ಅರ್ಜುನ್ ಅವರನ್ನು ಐಜಿ ಅವರ ನಿರ್ದೇಶನದ ಮೇರೆಗೆ ಅಮಾನತು ಮಾಡಿದ್ದು, ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಐಜಿ ಅವರು ಈ ಪ್ರಕರಣದ ಇಲಾಖಾ ತನಿಖೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಡಿವೈಎಸ್ಪಿ ಅವರಿಗೆ ವಹಿಸಿದ್ದಾರೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News