ಲಕ್ಷದ್ವೀಪದ ಜನರ ನಾಗರಿಕ ಹಕ್ಕುಗಳ ವಿರುದ್ಧದ ನಡೆಯನ್ನು ಪ್ರತಿರೋಧಿಸಬೇಕಾಗಿದೆ: ಪಾಪ್ಯುಲರ್ ಫ್ರಂಟ್

Update: 2021-05-25 17:39 GMT

ಬೆಂಗಳೂರು, ಮೇ 25: ಲಕ್ಷದ್ವೀಪದ ಮೂಲ ನಿವಾಸಿಗಳ ಧಾರ್ಮಿಕ, ಸಾಂಸ್ಕೃತಿಕ, ಭಾಷಿಕ ಅಸ್ಮಿತೆ ಮತ್ತು ನಾಗರಿಕ ಹಕ್ಕುಗಳಿಗೆ ಅಪಾಯಕಾರಿಯಾದ ಕೇಂದ್ರ ಸರಕಾರದ ನಡೆಯನ್ನು ಪ್ರತಿರೋಧಿಸಲು ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳು ಮುಂದೆ ಬರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖ್ಯಸ್ಥ ಒ.ಎಂ.ಎ.ಸಲಾಂ ಕರೆ ನೀಡಿದ್ದಾರೆ.

ಪ್ರಫುಲ್ ಪಟೇಲ್ ಕೇಂದ್ರಾಡಳಿತ ಪ್ರದೇಶದ ನೂತನ ಕೇಂದ್ರೀಯ ಆಡಳಿತಾಧಿಕಾರಿಯಾಗಿ ಅಧಿಕಾರ ಕೈಗೆತ್ತಿಕೊಂಡ ಬಳಿಕ ಲಕ್ಷದ್ವೀಪದಲ್ಲಿ ನಿಯಮ ಮತ್ತು ಸುಧಾರಣೆಗಳನ್ನು ಪ್ರಕಟಿಸಲಾಗುತ್ತಿದ್ದು, ಇವು ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂಬ ವಿಚಾರವು ತೀವ್ರ ಕಳವಳಕಾರಿಯಾಗಿದೆ. ಬಿಜೆಪಿ ನಾಯಕ ಮತ್ತು ಮೋದಿಯ ನಿಕಟವರ್ತಿ ಪ್ರಫುಲ್ ಪಟೇಲ್ ನೇಮಕಾತಿಯು ದುಷ್ಟ ಉದ್ದೇಶಗಳನ್ನು ಹೊಂದಿರುವ ರಾಜಕೀಯ ನಿರ್ಧಾರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯು ಐಎಎಸ್ ಅಧಿಕಾರಿಯಾಗಿರುವ ಅಗತ್ಯವಿದೆ ಎಂಬ ಚಾಲ್ತಿಯಲ್ಲಿರುವ ಮಾನದಂಡದ ಉಲ್ಲಂಘನೆಯೂ ಆಗಿದೆ. ಆತನ ಆಡಳಿತದಲ್ಲಿ ಕೈಗೊಳ್ಳಲಾಗುತ್ತಿರುವ ಅಭೂತಪೂರ್ವ ಸರ್ವಾಧಿಕಾರಿ ಕ್ರಮಗಳು ದ್ವೀಪ ನಿವಾಸಿಗಳ ದೈನಂದಿನ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುವುದು ಮಾತ್ರವಲ್ಲದೇ, ಅವರ ಅನನ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನೂ ನಾಶಪಡಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅದರೊಂದಿಗೆ ಇಡೀ ದ್ವೀಪಸಮೂಹದ ಜೀವವೈವಿಧ್ಯತೆ ಮತ್ತು ಪರಿಸರದ ಮೇಲೆ ಮತ್ತಷ್ಟು ಹಾನಿ ಉಂಟು ಮಾಡಲಿದೆ. ಗೋ ಮಾಂಸ ನಿಷೇಧವನ್ನು ಹೇರುವ ಮತ್ತು ಶಾಲೆಯ ಮಧ್ಯಾಹ್ನದೂಟದ ಪಟ್ಟಿಯಿಂದ ದನದ ಮಾಂಸವನ್ನು ತೆಗೆದು ಹಾಕುವ ಕ್ರೂರ ನಿರ್ಧಾರವು ಪ್ರಮುಖವಾಗಿ ಮುಸ್ಲಿಮ್ ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಕೇಸರೀಕರಣಗೊಳಿಸುವ ಸಂಘಪರಿವಾರದ ಅಜೆಂಡಾವನ್ನು ಹೇರುವ ಭಾಗವಾಗಿದೆ ಎಂದು ಅವರು ದೂರಿದ್ದಾರೆ.

ವರುಷದಿಂದ ಈ ದ್ವೀಪವು ಬಹುತೇಕ ಕೋವಿಡ್ ಮುಕ್ತವಾಗಿಯೇ ಉಳಿದಿದೆ. ಆದರೆ ಜನರ ತೀವ್ರ ವಿರೋಧದ ಹೊರತಾಗಿಯೂ ಪ್ರಫುಲ್ ಪಟೇಲ್ ಇಲ್ಲಿ ಪರಿಷ್ಕೃತ ಕೋವಿಡ್ ಶಿಷ್ಟಾಚಾರಗಳನ್ನು ಜಾರಿಗೊಳಿಸಿದರು. ಈ ನಿರ್ಧಾರದ ನಂತರ ಈ ಸಾಂಕ್ರಾಮಿಕವು ಇಲ್ಲಿ ವೇಗವಾಗಿ ಹರಡಲು ಪ್ರಾರಂಭವಾಯಿತು. ಪರಿಷ್ಕೃತ ಶಿಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಮುಂದೆ ಬಂದವರ ಮೇಲೆ ಕಠಿಣ ಪ್ರಕರಣಗಳನ್ನು ಹೇರಿ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.

ಲಕ್ಷದ್ವೀಪದಲ್ಲಿ ಈಗ ಕರಾಳ ಗೂಂಡಾ ಕಾಯ್ದೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದು ದೇಶದ ಅಪರಾಧ ದರ ಮತ್ತು ಖೈದಿಗಳ ಸಂಖ್ಯೆ ಕಡಿಮೆ ಇರುವ ಅತ್ಯಂತ ಶಾಂತಿಯುತ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾಗಿದೆ. ಇದನ್ನು ದ್ವೀಪದಲ್ಲಿ ಉದ್ಭವಿಸಬಹುದಾದ ಯಾವುದೇ ರಾಜಕೀಯ ಅಸಹಮತಿಗಾಗಿ ಕಾಯುತ್ತಿರುವ ದಮನಕಾರಿ ಕ್ರಮಗಳಿಗೆ ಮುನ್ನುಡಿಯಾಗಿ ಪರಿಗಣಿಸಬೇಕಾಗಿದೆ ಎಂದು ಸಲಾಂ ತಿಳಿಸಿದ್ದಾರೆ.

ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ನಿಬಂಧನೆಗಳು ಅಪ್ರಜಾಸತ್ತಾತ್ಮಕವಾಗಿದೆ ಮತ್ತು ಇದು ತಪ್ಪು ವಿಧಾನಗಳ ಮೂಲಕ ದ್ವೀಪ ನಿವಾಸಿಗಳ ಭೂ ಒಡೆತನ ಹಾಗೂ ಬಳಕೆಯ ಮೇಲೆ ನಿರ್ಬಂಧವನ್ನು ಹೇರುತ್ತದೆ. ಅದೇ ವೇಳೆ ಇದು ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ಅನಿಯಂತ್ರಿತ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಆಡಳಿತವು ಇದೀಗ ಕೋಸ್ಟಲ್ ರೆಗ್ಯುಲೇಷನ್ ಝೋನ್ ಮಾನದಂಡದ ಸಬೂಬು ನೀಡಿ, ಯಾವುದೇ ಪೂರ್ವ ನೋಟೀಸು ನೀಡದೆ ಮೀನುಗಾರರು ತಮ್ಮ ಬೋಟುಗಳನ್ನು ನಿಲ್ಲಿಸುತ್ತಿದ್ದ ಮತ್ತು ಶೀತಲೀಕರಣದ ಉದ್ದೇಶಕ್ಕಾಗಿ ಬಳಸುತ್ತಿದ್ದ ಶೆಡ್‍ಗಳನ್ನು ಧ್ವಂಸಗೊಳಿಸುತ್ತಿದೆ. ಇದು ಜನರ ಜೀವನೋಪಾಯದ ಮೇಲಿನ ದಾಳಿಯಾಗಿದೆ. ಬಹುತೇಕ ದ್ವೀಪ ನಿವಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಎಂದು ಸಲಾಂ ತಿಳಿಸಿದ್ದಾರೆ.

ನೂರಾರು ಸಂಖ್ಯೆಯ ತಾತ್ಕಾಲಿಕ ಕಾರ್ಮಿಕರನ್ನು ಪ್ರವಾಸೋದ್ಯಮ ಮತ್ತು ಸರಕಾರದ ಇತರ ಇಲಾಖೆಗಳಿಂದ ತೆಗೆದುಹಾಕಲಾಗಿದೆ. ದ್ವೀಪದ ಜನರ ಮೇಲೆ ವಿಚಿತ್ರ ಕಾನೂನುಗಳನ್ನು ಮತ್ತು ನಿರ್ಬಂಧಗಳನ್ನು ಹೇರಲಾಗುತ್ತಿದ್ದು, ಇವು ದೇಶದ ಇತರ ಕಡೆಗಳಲ್ಲಿ ಎಲ್ಲೂ ಜಾರಿಯಲ್ಲಿಲ್ಲ. ಉದಾಹರಣೆಗೆ, ಲಕ್ಷದ್ವೀಪ ಪಂಚಾಯತ್ ರೆಗ್ಯುಲೇಷನ್‍ನ ಕರಡಿನಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಕ್ಷದ್ವೀಪವು ಕೇವಲ ನಮ್ಮ ರಜಾ ದಿನಗಳನ್ನು ಕಳೆಯಲು ಇರುವ ಉಷ್ಣವಲಯದ ಸ್ವರ್ಗವಲ್ಲ. ಇದಕ್ಕಿಂತಲೂ ಮಿಗಿಲಾಗಿ ದೇಶದ ಎಲ್ಲಾ ನಾಗರಿಕರಿಗೆ ಇರುವಂತಹ ಸಮಾನ ಹಕ್ಕುಗಳನ್ನು ಹೊಂದಿರುವ ಮತ್ತು ಪರಿಶಿಷ್ಟ ಪಂಗಡಗಳಂತೆ ಹೆಚ್ಚುವರಿಯಾಗಿ ವಿಶೇಷಾಧಿಕಾರವನ್ನು ಹೊಂದಿರುವ ಜನರ ನೆಲೆಯಾಗಿದೆ. ಅವರು ತಮ್ಮದೇ ಆದ ಧಾರ್ಮಿಕ ಸಂಸ್ಕೃತಿ ಮತ್ತು ಭಾಷಿಕ ಅಸ್ಮಿತೆಯನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾಗರಿಕ ಹಕ್ಕುಗಳಿಂದ ಅವರನ್ನು ದೂರ ಮಾಡುವ ಮತ್ತು ಅವರ ಅನನ್ಯ ಅಸ್ಮಿತೆಗೆ ಅಪಾಯವೊಡ್ಡುವ ಯಾವುದೇ ಪ್ರಯತ್ನಗಳು ಫ್ಯಾಶಿಸಂ ಆಗಿದೆ.  ಲಕ್ಷದ್ವೀಪದ ಮೂಲ ನಿವಾಸಿಗಳ ವಿರುದ್ಧದ ಹಿಂದುತ್ವ ದಮನಕಾರಿ ನಡೆಯನ್ನು ಪ್ರತಿರೋಧಿಸಲು ದೇಶದ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಮುಂದೆ ಬರಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ ಎಂದು ಸಲಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News