ಪಶ್ಚಿಮ ಬಂಗಾಳ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಆಸ್ಪತ್ರೆಗೆ ದಾಖಲು

Update: 2021-05-25 17:41 GMT

ಕೋಲ್ಕತಾ, ಮೇ 25: ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರಿಗೆ ಮೇ 18ರಂದು ಕೊರೋನ ಸೋಂಕು ದೃಢಪಟ್ಟಿದ್ದು, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ಸೋಂಕು ದೃಢಪಟ್ಟ ಬಳಿಕ 77ರ ಹರೆಯದ ಭಟ್ಟಾಟಾರ್ಯ ಅವರು ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಐಸೋಲೇಷನ್ನಲ್ಲಿ ಇದ್ದರು. ಆಸ್ಪತ್ರೆಯಲ್ಲಿ ದಾಖಲಾಗುವಂತೆ ಅವರಿಗೆ ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಅವರು ನಿರಾಕರಿಸಿದ್ದರು. ಅನಂತರ ಅವರ ಆಮ್ಲಜನಕದ ಪ್ರಮಾಣ ಶೇ. 90ಕ್ಕಿಂತ ಕೆಳಗೆ ಇಳಿಕೆಯಾಗಿತ್ತು. ನಿನ್ನೆ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ‌

ಭಟ್ಟಾಚಾರ್ಯ ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಡಿಸೆಂಬರ್ನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

ಭಟ್ಟಾಚಾರ್ಯ ಅವರ ಪತ್ನಿ ಮೀರಾ ಭಟ್ಟಾಚಾರ್ಯ ಅವರಿಗೆ ಕೂಡ ಕಳೆದ ವಾರ ಕೊರೋನ ಸೋಂಕು ದೃಢಪಟ್ಟಿತ್ತು. ಬಳಿಕ ಆವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಮವಾರ ನಡೆಸಲಾದ ಪರೀಕ್ಷೆಯಲ್ಲಿ ಅವರಿಗೆ ನೆಗೆಟಿವ್ ವರದಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News