ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೋದಿ ಸರಕಾರದಿಂದ ಕೆಟ್ಟ ಆಡಳಿತ: ಯೋಗೇಂದ್ರ ಯಾದವ್

Update: 2021-05-26 12:52 GMT

ಬೆಂಗಳೂರು, ಮೇ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ ಏಳು ವರ್ಷಗಳಲ್ಲಿ ತಾನು ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿಲ್ಲ. ಬದಲಿಗೆ, ದೇಶವನ್ನು ಇರುವ ಸ್ಥಿತಿಗಿಂತ ಅತ್ಯಂತ ಕೆಟ್ಟ ಸ್ಥಿತಿಗೆ ಕೊಂಡೊಯ್ಯಲಾಗಿದೆ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅತ್ಯಂತ ಕೆಟ್ಟ ಆಡಳಿತವೆಂದರೆ ಪ್ರಧಾನಿ ನರೇಂದ್ರ ಮೋದಿ ಸರಕಾರವೆಂದು ರೈತ ನಾಯಕ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

ಅನ್ನದ ಋಣ.ಕಾಂ ವತಿಯಿಂದ ದೆಹಲಿ ರೈತ ಹೋರಾಟದ ಚಾರಿತ್ರಿಕ ಮಹತ್ವ ಹಾಗೂ ಕರ್ನಾಟಕದ ರೈತ ಹೋರಾಟ-ಮುಂದೇನು? ಎಂಬುದರ ಕುರಿತು ಆಯೋಜಿಸಿದ್ದ ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಆದಾಯ ದುಪ್ಪಟ್ಟು ಮಾಡಲು ವಿಫಲ, ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಜಾರಿ ಮಾಡದಿರುವುದು, ಪ್ರಧಾನಮಂತ್ರಿ ಫಸಲ್‍ಬಿಮಾ ಯೋಜನೆ ಜಾರಿಯಲ್ಲಿ ನಿಷ್ಕ್ರಿಯೆ, ಅತಿವೃಷ್ಟಿ, ಅನಾವೃಷ್ಟಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿಲುವು ಜನವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗುವುದೆಂದು ದೇಶದ ಜನತೆಗೆ ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಒತ್ತಾಯಿಸಿದಾಗ ಇದನ್ನು ಜಾರಿ ಮಾಡಲು ಸಾಧ್ಯವಾಗುವುದಿಲ್ಲವೆಂದು ಸುಪ್ರೀಂ ಕೋರ್ಟ್‍ನಲ್ಲಿ ಸ್ಪಷ್ಟನೆ ನೀಡಿದೆ. ಹಾಗೆಯೇ ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ ಕೇಳಿದಾಗ, ಇದು ಕೇಂದ್ರ ಸರಕಾರದ ಕೆಲಸವಲ್ಲವೆಂದು ಹೇಳಿದೆ. ಇನ್ನು ಫಸಲ್‍ಭಿಮಾ ಯೋಜನೆಯನ್ನು ಎಲ್ಲ ಬೆಳೆಗಳಿಗೂ ಅನ್ವಯಿಸುವ ಭರವಸೆ ನೀಡಲಾಗಿತ್ತು. ಆದರೆ, ಈಗ ಕೇವಲ 13 ಬೆಳೆಗಳಿಗೆ ಸೀಮಿತಗೊಳಿಸಿದೆ. ಹೀಗೆ ಕೇಂದ್ರ ಸರಕಾರ ಜನವಿರೋಧಿ ಪಟ್ಟಿ ಸಾಕಷ್ಟು ಉದ್ದವಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಹೊಸದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ, ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತಗೊಳ್ಳದೆ ಹಲವು ಸಾಧ್ಯತೆಗಳನ್ನು, ಭರವಸೆಗಳನ್ನು ಮೂಡಿಸಿದೆ. ಹಿಂದೂ-ಮುಸ್ಲಿಮರಲ್ಲಿ ಒಗ್ಗಟ್ಟನ್ನು ಮೂಡಿಸಲು ಯಶಸ್ವಿಯಾಗಿದೆ. ಹಾಗೂ ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯವನ್ನು ನಿವಾರಿಸಿದೆ. ಹಾಗೂ ಜಾತಿ ಜಾತಿಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ರೈತ ಸಂಘಟನೆಗಳು ಹೊಸ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಕೇವಲ ರೈತರಿಗಾಗಿ ಮಾತ್ರ ರೂಪಿತವಾಗಿಲ್ಲ. ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪುನರ್ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದಾಗಿದೆ. ಕಾರ್ಪೊರೇಟ್ ಶಕ್ತಿಯ ಹಿಡಿತಕ್ಕೆ ಸಿಲುಕಿರುವ ದೇಶವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರೆದಿದೆ.

-ಯೋಗೇಂದ್ರ ಯಾದವ್, ರೈತ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News