ಮನೆಯೊಳಗೆ ಮನೆ ಹಿರಿಯನಿಲ್ಲ!

Update: 2021-05-27 07:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

 ಗಾಂಧೀವಾದವೆನ್ನುವುದು ಸದ್ಯದ ಭಾರತದಲ್ಲಿ ಮನೆಯ ಮೊಗಸಾಲೆಯ ಡೈನಿಂಗ್ ಟೇಬಲಿನ ತಟ್ಟೆಯಲ್ಲಿ ಅಲಂಕಾರಕ್ಕೆಂದೇ ಇಟ್ಟ ಹಣ್ಣುಗಳು. ಗಾಂಧಿಯನ್ನು ಮತ್ತು ಅವರ ಸಿದ್ಧಾಂತಗಳನ್ನು ಕೊಂದ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲು ಪ್ರತಿ ಸ್ವಾತಂತ್ರೋತ್ಸವದ ದಿನ ಅಥವಾ ಗಾಂಧಿಜಯಂತಿಯ ದಿನ ಒಂದಿಷ್ಟು ಹಿರಿಯ ಗಾಂಧೀವಾದಿಗಳಿಗೆ ಸನ್ಮಾನಗಳನ್ನು ಮಾಡುತ್ತಾ, ಗಾಂಧೀವಾದವನ್ನು ಕೊಂಡಾಡುತ್ತಾ ಬರುತ್ತಿದ್ದೇವೆ. ಗಾಂಧೀವಾದಿಗಳು ಉಪಯೋಗಕ್ಕೆ ಬರುವುದು ಈ ದಿನಗಳಲ್ಲಿ ಮಾತ್ರ. ಇತ್ತೀಚಿನ ದಿನಗಳಲ್ಲಿ, ಕನಿಷ್ಠ ಶಾಲು ಹೊದಿಸಿ ಸನ್ಮಾನ ಮಾಡುವುದಕ್ಕೂ ಗಾಂಧೀವಾದಿಗಳು ಸಿಗುತ್ತಿಲ್ಲ. ಗಾಂಧೀವಾದಿಗಳನ್ನು ಅಳಿವಿನಂಚಿನಲ್ಲಿರುವ ಜೀವಿಗಳ ಸಾಲುಗಳಿಗೆ ಸೇರ್ಪಡಿಸಲಾಗಿದೆ. ಗಾಂಧಿ ಜಯಂತಿಯ ದಿನ, ಹಿರಿಯ ಗಾಂಧೀವಾದಿಗಳನ್ನು ಹುಡುಕಾಡುವುದಕ್ಕಾಗಿಯೇ ಅಧಿಕಾರಿಗಳು ಕೆಲವು ಸಿಬ್ಬಂದಿಯನ್ನು ಬಿಟ್ಟು ಬಿಡುತ್ತಾರೆ ಅಥವಾ ಇರುವ ಗಾಂಧೀವಾದಿಗಳನ್ನು ಗಾಂಧಿ ಜಯಂತಿಗೆ ಇನ್ನೂ ಒಂದು ತಿಂಗಳಿರುವಾಗಲೇ ಕಾದಿರಿಸುವಷ್ಟು ಅವರ ಸಂಖ್ಯೆ ಇಳಿಯುತ್ತಿದೆ.

ಈ ಸಂದರ್ಭವನ್ನು ಬಳಸಿಕೊಳ್ಳಲು ನಕಲಿ ಗಾಂಧೀವಾದಿಗಳೂ ಹುಟ್ಟುತ್ತಿದ್ದಾರೆ. ಗಾಂಧಿ ಚಿಂತನೆಯ ಕುರಿತಂತೆ ಅರಿವು ಮಾತ್ರವಲ್ಲ, ಅದರ ಬಗ್ಗೆ ನಂಬಿಕೆಯೂ ಇಲ್ಲದ, ರಾಜಕಾರಣಿಗಳ ಜೊತೆಗೆ ಒಳಗೊಳಗೆ ಗುರುತಿಸಿಕೊಂಡು ಬದುಕು ನಡೆಸುತ್ತಿರುವ ಜನರೆಲ್ಲ ಇಂದು ಹಿರಿಯ ಗಾಂಧೀವಾದಿಗಳಾಗಿ, ಮೈಕ್ ಮುಂದೆ ಭಾಷಣ ಬಿಗಿಯ ತೊಡಗಿದ್ದಾರೆ. ಇದನ್ನು ಕಂಡು ಯುವ ತಲೆಮಾರು ಗಾಂಧೀವಾದದ ಕುರಿತಂತೆ ಭರವಸೆ ಕಳೆದುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಗಾಂಧಿಯನ್ನು ಕೊಂದ ಗೋಡ್ಸೆಯ ಚಿಂತನೆಯನ್ನು ಹಿಂಬಾಲಿಸುವ ತಲೆಮಾರೊಂದು ಹುಟ್ಟಿಕೊಂಡಿದೆ. ಯಾವ ಲಜ್ಜೆಯೂ ಇಲ್ಲದೆ ಬಹಿರಂಗವಾಗಿಯೇ ಅವರು ಗೋಡ್ಸೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಗಾಂಧಿಯ ಹತ್ಯೆಯನ್ನು ಸಮರ್ಥಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಗಾಂಧೀವಾದದ ಕೊನೆಯ ಕೊಂಡಿಯ ರೀತಿಯಲ್ಲಿ ಬದುಕಿದ್ದ ಎಚ್. ಎಸ್. ದೊರೆಸ್ವಾಮಿ ನಮ್ಮನ್ನು ಅಗಲಿದ್ದಾರೆ. ಅಪ್ಪಟ ಗಾಂಧೀವಾದಿ, ಸ್ವಾತಂತ್ರ ಹೋರಾಟಗಾರ, ಶತಾಯುಷಿ ದೊರೆಸ್ವಾಮಿ ಅವರು ಎಂದಿಗೂ, ಮೊಗಸಾಲೆಯಲ್ಲಿ ಅಲಂಕಾರಕ್ಕಾಗಿ ಇಟ್ಟ ಹಣ್ಣಿನಂತೆ ಬದುಕಲಿಲ್ಲ. ಅವರು ತನ್ನ ಬದುಕಿನ ಕಟ್ಟ ಕಡೆಯವರೆಗೂ ಮನೆಯ ಆಗು ಹೋಗುಗಳನ್ನು ಎಚ್ಚರಿಕೆಯ ಕಣ್ಣಿನಿಂದ ಗಮನಿಸಿ ಗದರಿಸಿ, ಮಾರ್ಗದರ್ಶನ ನೀಡುತ್ತಿದ್ದ ಹಿರಿಯರಂತೆಯೇ ಬದುಕಿದರು.

ಸಾಧಾರಣವಾಗಿ ಹಿರಿಯ ಗಾಂಧೀವಾದಿಗಳು, ಶತಾಯುಷಿಗಳು ಎಂದೆಲ್ಲ ಬಿರುದು ಬಾವಲಿಗಳನ್ನು ಹೊಂದಿದವರು ಸಾರ್ವಜನಿಕವಾಗಿ ಸಕ್ರಿಯರಾಗಿರುವುದಿಲ್ಲ. ವಿವಿಧ ಸಭೆ ಸಮಾರಂಭಗಳಿಗೆ ಇವರನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳುವುದೇ ಹೆಚ್ಚು. ಆದರೆ ದೊರೆಸ್ವಾಮಿಯವರು ತನ್ನ ಬದುಕಿನ ಕೊನೆಯ ದಿನಗಳವರೆಗೂ ಸಾರ್ವಜನಿಕವಾಗಿ ಸಕ್ರಿಯವಾಗಿದ್ದರು. ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಅವರೆಂದೂ ಅಂಜಿದ್ದೇ ಇಲ್ಲ. ವಯಸ್ಸು ಅವರ ಹೋರಾಟಕ್ಕೆ ಸಮಸ್ಯೆಯಾಗಿರಲೇ ಇಲ್ಲ. ಅವರು ಗಾಂಧೀವಾದದ ಹಳೆಯ ನೆನಪುಗಳ ಜೊತೆಗೆ ಬದುಕುತ್ತಿರಲಿಲ್ಲ. ಬದಲಿಗೆ ಅದನ್ನು ಇಂದಿನ ದಿನಗಳಲ್ಲಿ ಜಾರಿಗೊಳಿಸುವ ತಹತಹಿಕೆಯನ್ನು ಹೊಂದಿದ್ದರು. ಆದುದರಿಂದಲೇ, ಅವರಿಗೆ ಸರಕಾರದ ಯಾವುದೇ ವಿಶೇಷ ಸ್ಥಾನಮಾನಗಳು ದೊರಕಲಿಲ್ಲ. ಅದನ್ನು ಅವರು ನಿರೀಕ್ಷಿಸಲೂ ಇಲ್ಲ. ಭ್ರಷ್ಟಾಚಾರದ ವಿರುದ್ಧ, ರೈತರ ಹೋರಾಟದ ಪರ, ಕಾರ್ಮಿಕರ ಪರ, ಮೂಲನಿವಾಸಿಗಳ ಪರ ಅವರು ತನ್ನ ಹೋರಾಟವನ್ನು ಸದಾ ಜಾರಿಯಲ್ಲಿರಿಸಿದ್ದರು. ಸ್ವತಂತ್ರ ಭಾರತ ಸಾಗುತ್ತಿರುವ ಪತನದ ಹಾದಿಯನ್ನು ನೋಡಿ ವಿಷಾದದಿಂದ ಮಾತನಾಡುತ್ತಿದ್ದರು.

ಇಳಿ ವಯಸ್ಸಿನಲ್ಲೂ ಶತ್ರುಗಳ ಟೀಕೆ, ವ್ಯಂಗ್ಯಗಳಿಗೆ ಅವರು ಗುರಿಯಾಗಿದ್ದರೆನ್ನುವುದೇ ಅವರ ಶಕ್ತಿಯನ್ನು ತೋರಿಸುತ್ತದೆ. ಸ್ವಾತಂತ್ರ ಹೋರಾಟದ ಕಾಲದಲ್ಲಿ ದೊರೆಸ್ವಾಮಿ ಹಿಂಸಾ ಹೋರಾಟದ ಕಡೆಗೂ ಆಕರ್ಷಿತರಾಗಿದ್ದರು ಎನ್ನುವುದನ್ನು ಹಲವರು ಬರೆದಿದ್ದಾರೆ. ಇದೇ ಸಂದರ್ಭದಲ್ಲಿ, ಅವರ ಆಳವಾದ ನಂಬಿಕೆ ಅಹಿಂಸೆಯೇ ಆಗಿತ್ತು ಮತ್ತು ಗಾಂಧಿಯಂತೆಯೇ ಅವರು ಅಸಾಧ್ಯ ಧೈರ್ಯವಂತರೂ ಆಗಿದ್ದರು. ತನ್ನ ಅಹಿಂಸೆಯ ಬಲದಿಂದ ಶತ್ರುವಿನ ಜೊತೆಗೂ ಮುಖಕೊಟ್ಟು ಮಾತುಕತೆ ನಡೆಸುವ ಆತ್ಮಬಲವನ್ನು ಅವರು ಹೊಂದಿದ್ದರು. ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಚಿಗುರು ಬಿಟ್ಟು, ರಕ್ತಸಿಕ್ತ ವಾತಾವರಣವನ್ನು ಸೃಷ್ಟಿಸಿದಾಗ, ನಕ್ಸಲರನ್ನು ಶರಣಾಗಿಸುವ ಮಾತುಕತೆಯ ಮಧ್ಯಸ್ಥಿಕೆಯನ್ನು ವಹಿಸಿದರು.

ಹಲವು ಯುವಕರು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾಗ, ಹಿಂಸೆಯನ್ನು ಖಂಡಿಸಿದ ದೊರೆಸ್ವಾಮಿಯವರು, ನಕ್ಸಲರಿಗೆ ಶಸ್ತ್ರಾಸ್ತ್ರ ಕೆಳಗಿಟ್ಟು ಮುಖ್ಯವಾಹಿನಿಗೆ ಬರಲು ಆಹ್ವಾನ ನೀಡಿದರು. ಯಾವ ಅಂಜಿಕೆಯೂ ಇಲ್ಲದೆ ಸರಕಾರದ ಜೊತೆಗೆ ಮಾತುಕತೆ ನಡೆಸಿ, ಅವರನ್ನು ಮುಖ್ಯವಾಹಿನಿಗೆ ಕರೆತರಲು ಒತ್ತಡ ಹೇರಿದರು. ಇವರ ನೇತೃತ್ವದ ತಂಡದ ಮಾತುಕತೆಯ ಫಲವಾಗಿ ಹಲವು ಶಂಕಿತ ನಕ್ಸಲರೆಂದು ಗುರುತಿಸಲ್ಪಟ್ಟ ಯುವಕರು ಹಿಂಸೆ ತ್ಯಜಿಸಿ ಮುಖ್ಯವಾಹಿನಿಗೆ ಬಂದರು. ಪ್ರಜಾಸತ್ತಾತ್ಮಕವಾದ ಅಹಿಂಸಾತ್ಮಕ ಪ್ರತಿಭಟನೆಯ ಜೊತೆಗೆ ಕೈ ಜೋಡಿಸಿದರು. ಗಾಂಧಿಯ ಅಹಿಂಸೆಗೆ ಸಂದ ಗೆಲುವು ಇದು. ಆದರೆ ಇದು ಬಲಪಂಥೀಯ ಶಕ್ತಿಗಳ ಕೆಂಗಣ್ಣಿಗೆ ಕಾರಣವಾಯಿತು. ದೊರೆಸ್ವಾಮಿಯವರನ್ನು ‘ನಕ್ಸಲರು’ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನವೂ ನಡೆಯಿತು. ಆದರೆ ಇವೆಲ್ಲಕ್ಕೂ ಜಗ್ಗದೆ ದೊರೆಸ್ವಾಮಿಯವರು ತಮ್ಮ ಹೋರಾಟವನ್ನು ಮುಂದುವರಿಸಿದರು.

ಸಾಧಾರಣವಾಗಿ ನಿವೃತ್ತ ಗಾಂಧೀವಾದಿಗಳು ಯಾವುದೇ ವಿವಾದಗಳಿಗೆ ಸಿಕ್ಕಿಕೊಳ್ಳದೆ, ರಕ್ಷಣಾ ವಲಯದಲ್ಲಷ್ಟೇ ಆಟವಾಡುತ್ತಿರುತ್ತಾರೆ. ಆದರೆ ದೊರೆಸ್ವಾಮಿಯವರು ನೇರವಾಗಿ ಪ್ರಭುತ್ವದ ವಿರುದ್ಧ ಧ್ವನಿಯೆತ್ತುತ್ತಾ ಬಂದವರು. ಪ್ರಭುತ್ವದ ಶತ್ರುತ್ವವನ್ನು ಕಟ್ಟಿಕೊಳ್ಳಲು ಅವರು ಹಿಂಜರಿಯಲಿಲ್ಲ. ಹಲವು ರಾಜಕಾರಣಿಗಳೇ ದೊರೆಸ್ವಾಮಿಯವರನ್ನು ಟೀಕಿಸಿದರು. ‘ದೇಶದ್ರೋಹಿ’ ಎಂದು ಕರೆಯುವ ನೀಚತನವನ್ನು ಪ್ರದರ್ಶಿಸಿದರು. ಆದರೆ ಗೋಡ್ಸೆವಾದಿಗಳು ವಿಜೃಂಭಿಸುತ್ತಿರುವ ಸಮಾಜದಲ್ಲಿ ಗಾಂಧೀವಾದಿಯಾಗಿ ದೇಶದ ಪರವಾಗಿ ಮಾತನಾಡುವುದೇ ದೇಶದ್ರೋಹವಾಗುತ್ತದೆ ಎನ್ನುವುದು ದೊರೆಸ್ವಾಮಿಯವರಿಗೆ ಚೆನ್ನಾಗಿಯೇ ತಿಳಿದಂತಿತ್ತು.

ಅವರು ಆ ನಿಂದನೆಗೆ ತೀವ್ರವಾಗಿ ನೊಂದುಕೊಂಡಿದ್ದರಾದರೂ, ಹೋರಾಟದಿಂದ ಹಿಂಜರಿಯುವ ಮನಸ್ಥಿತಿಯನ್ನು ಯಾವತ್ತೂ ಪ್ರದರ್ಶಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋರಾಟದ ಹಾದಿಯಲ್ಲಿರುವ ಯುವಕರಿಗೆ ಅವರು ಸ್ಫೂರ್ತಿಯಾದರು. ಬೆಂಬಲದ ಮಾತುಗಳನ್ನಾಡುತ್ತಿದ್ದರು. ಕರ್ನಾಟಕದಲ್ಲಿ ಇಂದು ಜನಚಳವಳಿ ಒಂದಿಷ್ಟು ಉಸಿರಾಡುತ್ತಿದ್ದರೆ ಅದಕ್ಕೆ ದೊರೆಸ್ವಾಮಿಯವರ ಕೊಡುಗೆ ಬಹುದೊಡ್ಡದು. ಎಂದೂ ನಿರ್ದಿಷ್ಟ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಳ್ಳದೆ, ತನ್ನದೇ ಆದ ಗುಂಪನ್ನು, ಪೀಠವನ್ನು ಕಟ್ಟಿಕೊಳ್ಳದೆ, ಎಲ್ಲಿ ನ್ಯಾಯದ ಪರ ಹೋರಾಟಗಳು ನಡೆಯುತ್ತವೆಯೋ ಅಲ್ಲಿ ಯಾವ ಬಿಗುಮಾನವೂ ಇಲ್ಲದೆ ಸೇರಿಕೊಳ್ಳುತ್ತಿದ್ದ ದೊರೆಸ್ವಾಮಿ ನಿಜವಾದ ಅರ್ಥದ ಗಾಂಧೀವಾದಿಯಾಗಿದ್ದರು. ಅವರಿಲ್ಲದ ಕರ್ನಾಟಕ, ಹಿರಿಯರನ್ನು ಕಳೆದುಕೊಂಡ ಮನೆಯಂತೆ ಖಾಲಿ ಖಾಲಿಯಾಗಿದೆ. ಸೋರುತ್ತಿರುವ ಮನೆಯ ಒಳಗೆ ಯುವ ಕನಸುಗಳು ಮುಂದಿನ ದಾರಿಯ ಗೊತ್ತುಗುರಿಯಿಲ್ಲದೆ ಬಿದ್ದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News