ದೇಶದ ಪ್ರಜಾತಾಂತ್ರಿಕ ಮೌಲ್ಯಗಳು

Update: 2021-05-27 10:42 GMT

 ► ಭಾಗ-2



ಟಿ.ಆರ್ ಭಟ್


ನಾಗರಿಕ ಹಕ್ಕುಗಳ ರಕ್ಷಣೆ

ದೇಶದ ಸಂವಿಧಾನವು ಪ್ರಜೆಗಳಿಗೆ ಕೊಟ್ಟಿರುವ ಮೂಲಭೂತ ಹಕ್ಕುಗಳ ರಕ್ಷಣೆಮಾಡುವ ಜವಾಬ್ದಾರಿ ಕಾರ್ಯಾಂಗಕ್ಕಿದೆ. ಈ ಹಕ್ಕುಗಳನ್ನು ಚಲಾಯಿಸುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶ ದಿಂದ ಕೆಲವು ಶಾಸನಬದ್ಧ ಮಿತಿಗಳನ್ನು ಕಾರ್ಯಾಂಗವು ಪ್ರಜೆಗಳ ಮೇಲೆ ಹೇರಬಹುದು.

 ಕಳೆದ ಏಳು ವರ್ಷಗಳಲ್ಲಿ ವಿಭಿನ್ನ ಕಾರಣಗಳನ್ನು ನೀಡಿ ನಾಗರಿಕ ಹಕ್ಕುಗಳ ದಮನ ಮಾಡುವ ಪ್ರವೃತ್ತಿ ಬೆಳೆದಿದೆ. ಸರಕಾರದ ನೀತಿಯನ್ನು ವಿರೋಧಿಸುವ ಸಾಮಾಜಿಕ ಕಾರ್ಯಕರ್ತರನ್ನು, ಆದರ್ಶವಾದಿ ಯುವಜನರನ್ನು, ದಮನಿತರ ಹಕ್ಕಿಗಾಗಿ ಹೋರಾಡುವವರನ್ನು, ಕರ್ತವ್ಯನಿರತ ಪತ್ರಕರ್ತರನ್ನು ಬಂಧಿಸಿ ವಿಚಾರಣೆಯಿಲ್ಲದೆ ಜೈಲಿಗೆ ತಳ್ಳಲಾಗಿದೆ. ಈ ತಿಂಗಳಷ್ಟೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ ಭಿತ್ತಿಪತ್ರಗಳನ್ನು ಅಂಟಿಸಿದ ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. ಮಾನವೀಯತೆಯ ನೆಲೆಯಲ್ಲಿ ಜಾಮೀನಿನ ಮೇಲೆ ಸೆರೆಮನೆಯಿಂದ ಬಿಡುಗಡೆಗೆ ಕೋರ್ಟಿಗೆ ವಿನಂತಿಸಿದರೂ ಸರಕಾರ ಅವರ ಸ್ವಾತಂತ್ರಹರಣ ಮಾಡುತ್ತಲೇ ಇದೆ. ಅವರನ್ನು ದೇಶದ್ರೋಹಿಗಳು, ನಕ್ಸಲರು ಎಂದು ಬಿಂಬಿಸಿ ಆಳುವ ಪಕ್ಷದ ಬೆಂಬಲಿಗರ ಮೂಲಕ ಮಾನಸಿಕ ಹಿಂಸೆಗೆ ಗುರಿಮಾಡಲಾಗುತ್ತಿದೆ. ಸರಕಾರದ ಕೆಂಗಣ್ಣಿಗೆ ತುತ್ತಾದವರಲ್ಲಿ ಅಮೂಲ್ಯ ಲಿಯೋನ, ದಿಶಾ ರವಿ, ಸಫೂರಾ ಝರ್ಗರ್, ಉಮರ್ ರಶೀದ್ ಮುಂತಾದ ಯುವಜನರು, ವಯೋವೃದ್ಧರಾದ ವರವರ ರಾವ್ ಮತ್ತು ಸ್ಟಾನ್ ಸ್ವಾಮಿ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಅನೇಕ ವಕೀಲರು ಮತ್ತು ಪತ್ರಿಕಾ ವರದಿಗಾರರು ಒಳಗೊಂಡಿದ್ದಾರೆ. ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಸೈನಿಕರೊಬ್ಬರ ಮಗಳು 2017ರಲ್ಲಿ ದಿಲ್ಲಿಯ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆ ಪಾಕಿಸ್ತಾನ-ಭಾರತದ ನಡುವೆ ಶಾಂತಿ ಅಗತ್ಯವೆಂದು ಪ್ರತಿಪಾದಿಸಿದ್ದೇ ತಡ, ಆಕೆಯನ್ನು ಮಾನಸಿಕ ಹಿಂಸೆಗೆ ಸಂಘಪರಿವಾರದ ಗಣ್ಯರೂ ಕೇಂದ್ರ ಸಚಿವರೂ ಹೇಗೆ ಗುರಿಮಾಡಿದ್ದರೆಂಬುದನ್ನು ಜ್ಞ್ಞಾಪಿಸಿಕೊಳ್ಳಬೇಕು.

ಒಂದೆಡೆಯಲ್ಲಿ ಹಕ್ಕುಗಳಿಗಾಗಿ ಧ್ವನಿ ಎತ್ತುವವರ ಮತ್ತು ಸರಕಾರದ ನೀತಿಯನ್ನು ಖಂಡಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೋದಿ ಸರಕಾರವು, ಇನ್ನೊಂದೆಡೆ ಧರ್ಮ ಮತ್ತು ಸಂಸ್ಕೃತಿಗೆ ಅಗೌರವ ಎಸಗಿದ್ದಾರೆಂದು ಅಥವಾ ಗೋಕಳ್ಳತನದ ಆರೋಪ ಹೊರಿಸಿ ಆಡಳಿತಪಕ್ಷದ ಅನುಯಾಯಿಗಳು ಹಿಂಸೆಗೆ ಪ್ರಚೋದಿಸಿದಾಗ, ಕಾನೂನನ್ನು ಕೈಗೆತ್ತಿಕೊಂಡು ನಿರಪರಾಧಿಗಳ ಮೇಲೆ ಹಲ್ಲೆ ಮಾಡಿದಾಗ ಅಥವಾ ಅವರನ್ನು ಹತ್ಯೆ ಮಾಡಿದಾಗ ತಟಸ್ಥವಾಗಿರುತ್ತದೆ ಅಥವಾ ಆ ವರ್ತನೆ ಪ್ರತಿಕ್ರಿಯಾತ್ಮಕವಾದುದೆಂದು ಘೋಷಿಸಿ ಅಪರಾಧಿಗಳ ಮೇಲೆ ಕಾನೂನು ರೀತ್ಯಾ ಕ್ರಮಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಸಮಾನತೆಯ ಹಕ್ಕನ್ನು, ಮೊಟಕುಗೊಳಿಸುವ ಈ ರೀತಿಯ ಆತಂಕಕಾರಿ ಪ್ರವೃತ್ತಿ ಕಳೆದ ಏಳು ವರ್ಷಗಳಲ್ಲಿ ಬೆಳೆಯುತ್ತಾ ಬಂದಿದೆ.

ಸಂಸ್ಥೆಗಳ ಸ್ವಾಯತ್ತತೆಗೆ ಕಡಿವಾಣ

ನ್ಯಾಯಾಂಗ

ಸಂವಿಧಾನದ ಮೂಲಕ ಜನ್ಮ ತಾಳಿದ ನ್ಯಾಯಾಂಗದ ಮೇಲೆ ಪರೋಕ್ಷವಾಗಿ, ಕೆಲವೊಮ್ಮೆ ಪ್ರತ್ಯಕ್ಷವಾಗಿ ಮೋದಿ ಸರಕಾರ ಹತೋಟಿ ಸಾಧಿಸಲು ಯತ್ನಿಸಿದೆೆ. ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳ ತಂಡ (ಕೊಲಿಜಿಯಂ) ಹಿಂದಿನ ಸಂಪ್ರದಾಯದಂತೆ ಹೊಸ ನ್ಯಾಯಮೂರ್ತಿಗಳ ನೇಮಕಾತಿಗೆ, ರಾಜ್ಯದ ಉಚ್ಚನ್ಯಾಯಾಲಯಗಳ ನ್ಯಾಯಮೂರ್ತಿಗಳ ಪದೋನ್ನತಿಗೆ ಅಥವಾ ವರ್ಗಾವಣೆಗೆ ಮಾಡುವ ಶಿಫಾರಸುಗಳನ್ನು ಕಾಲ ಮಿತಿಯೊಳಗೆ ಈ ಸರಕಾರ ಒಪ್ಪುವುದೇ ಇಲ್ಲ; ನಿರ್ದಿಷ್ಟವಾದ ಕಾರಣಗಳನ್ನು ಕೊಡದೆ ಶಿಫಾರಸುಗಳನ್ನು ತಿರಸ್ಕರಿಸಿದ್ದೂ ಇದೆ. 2016ರಲ್ಲಿ ಓರ್ವ ಮುಖ್ಯ ನ್ಯಾಯಮೂರ್ತಿ ನರೇಂದ್ರ ಮೋದಿಯವರು ಹಾಜರಿದ್ದ ಸಭೆಯಲ್ಲಿಯೇ ಇದರ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. 2018ರ ಆರಂಭದಲ್ಲಿ ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ನ್ಯಾಯಾಂಗದ ಮೇಲೆ ನಡೆಯುತ್ತಿರುವ ಒತ್ತಡದ ಬಗ್ಗೆ ಮಾತನಾಡಿ ಅದನ್ನು ತಡೆಯದಿದ್ದರೆ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯ ಕಾದಿದೆ ಎಂದು ಎಚ್ಚರಿಸಿದ್ದರು.

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಮೇಲೆಯೂ ಸರಕಾರವು ಒತ್ತಡ ಹಾಕಿದ ಸಂದರ್ಭಗಳಿವೆ. ಆಳುವ ಪಕ್ಷದ ಪದಾಧಿಕಾರಿಗಳು ಬಾಬರಿ ಮಸೀದಿಯ ವಿವಾದದ ಬಗ್ಗೆ ಕೋರ್ಟಿನಲ್ಲಿ ತಮಗೆ ಬೇಕಾದಂತೆ ನಿರ್ಧಾರ ಸಿಗಲಿದೆ ಎಂದು ಮುಂದಾಗಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕೊನೆಗೆ 2019ರಲ್ಲಿ ಸುಪ್ರೀಂ ಕೋರ್ಟು ‘ಮಸೀದಿಯನ್ನು ಕೆಡವಿದ್ದು ಅಪರಾಧ, ಆದರೆ ಆ ಜಾಗದಲ್ಲಿ ರಾಮ ಮಂದಿರ ಕಟ್ಟಬಹುದು’ ಎಂಬ ವಿಚಿತ್ರವಾದ ನಿರ್ಣಯವನ್ನು ನೀಡಿ ಆ ಜಾಗದಲ್ಲಿ ರಾಮಮಂದಿರವನ್ನು ನಿರ್ಮಿಸಲು ಹಸಿರು ನಿಶಾನೆಯನ್ನು ಕೊಟ್ಟಿತು. ಈ ನಿರ್ಣಯ ಬಂದ ಕೆಲವೇ ಸಮಯದಲ್ಲಿ ನಿವೃತ್ತರಾದ ಮುಖ್ಯ ನ್ಯಾಯಾಧೀಶರನ್ನು ರಾಜ್ಯಸಭೆಯ ಸದಸ್ಯರಾಗಿ ನೇಮಿಸಲಾಯಿತು. ಅವರ ಹಿಂದಿನ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಕೇರಳದ ರಾಜ್ಯಪಾಲರನ್ನಾಗಿ ಈ ಸರಕಾರ ನೇಮಿಸಿತ್ತು.

ಆಳುವ ಸರಕಾರದ ಧೋರಣೆಯಿಂದ ಮೂಲಭೂತ ಹಕ್ಕುಗಳ ಹರಣವಾಗುತ್ತಿದ್ದರೂ ತನ್ನ ಮುಂದೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ ನಾಗರಿಕರಿಗೆ ಸುಪ್ರೀಂ ಕೋರ್ಟು ತಿಂಗಳುಗಟ್ಟಲೆ ತಮ್ಮ ಅಹವಾಲುಗಳನ್ನು ಮಂಡಿಸುವ ಅವಕಾಶವನ್ನೇ ಕೊಡುತ್ತಿಲ್ಲ. ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನದತ್ತ ಸ್ಥಾನಮಾನಗಳನ್ನು 2019ರಲ್ಲಿ ಸುಗ್ರೀವಾಜ್ಞೆಯ ಮೂಲಕ ಕಸಿದುಕೊಂಡು ಅಲ್ಲಿನ ರಾಜಕೀಯ ಧುರೀಣರ, ಸಮಸ್ತ ನಾಗರಿಕರ ಹಕ್ಕುಗಳನ್ನು ಕಸಿದುಕೊಂಡಾಗ ನ್ಯಾಯಾಲಯವು ಅನ್ಯಾಯದ ತೀವ್ರತೆಯನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಸರಕಾರದ ಪ್ರತಿನಿಧಿಗಳು ಸಲ್ಲಿಸಿದ ‘ಅಫಿಡವಿಟ್’ಗಳ ವಿಮರ್ಶೆಯನ್ನೂ ಮಾಡದೆ ಅವುಗಳೇ ಸತ್ಯವೆಂದು ಒಪ್ಪಿಕೊಂಡ ಸಂದರ್ಭಗಳೇ ಅನೇಕವಿವೆ.

ಚುನಾವಣಾ ಆಯೋಗ

ಭಾರತದ ಚುನಾವಣಾ ಆಯೋಗವು ಚುನಾವಣೆಗಳನ್ನು ಸ್ವತಂತ್ರವಾಗಿ ನಡೆಸುವ ಸಂವಿಧಾನ ರೂಪಿಸಿದ ಸ್ವಾಯತ್ತ ಸಂಸ್ಥೆ. ಅದರ ನೇಮಕಾತಿಯನ್ನು ಕೇಂದ್ರ ಸರಕಾರವೇ ಮಾಡುವುದಾದರೂ ಆಯೋಗವು ಸರಕಾರದ ಅಧೀನ ಸಂಸ್ಥೆಯಲ್ಲ. ಭಾರತದ ಚುನಾವಣಾ ಪ್ರಕ್ರಿಯೆ ಅನನ್ಯವೆಂಬ ಹೆಗ್ಗಳಿಕೆ ನಮ್ಮ ಆಯೋಗದ ಈ ಹಿಂದಿನ ಕಾರ್ಯವೈಖರಿಯಿಂದ ಲಭಿಸಿದೆ. ಆದರೆ ಮೋದಿ ಸರಕಾರದ ಅಧಿಕಾರಾವಧಿಯಲ್ಲಿ ಅದರ ಸ್ವತಂತ್ರತೆಯ ಬಗ್ಗೆಯೇ ಸಂಶಯ ಹುಟ್ಟಿದೆ. ಇದಕ್ಕೆ ಪೂರಕವಾಗಿರುವ ಮೂರು ಘಟನೆಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. 2017ರಲ್ಲಿ ಗುಜರಾತಿನ ವಿಧಾನಸಭೆಗೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವಾಗ ಆಯೋಗವು ಮೊದಲಾಗಿ ಮತಗಣನೆಯ ದಿನವನ್ನು ಮಾತ್ರ ಪ್ರಕಟಿಸಿತು. ಇಡೀ ಚುನಾವಣೆಯ ವೇಳಾಪಟ್ಟಿಯನ್ನು ಒಟ್ಟಿಗೇ ಪ್ರಕಟಿಸುವುದು ಅನೂಚಾನವಾಗಿ ಅನುಸರಿಸಿಕೊಂಡ ಪದ್ಧತಿ. ಈ ಪದ್ಧತಿಯನ್ನು ಕಡೆಗಣಿಸಿ ಗುಜರಾತಿನವರೇ ಆದ ಪ್ರಧಾನಿ ಮೋದಿಯವರು ಒಂದು ಸುತ್ತಿನ ಚುನಾವಣಾ ರ್ಯಾಲಿಗಳನ್ನು ಮುಗಿಸಿದ ಬಳಿಕ ಮತದಾನದ ದಿನಾಂಕಗಳನ್ನು ಪ್ರಕಟಿಸಿತ್ತು. ಆಯೋಗದ ಈ ಹೊಸ ನಿರ್ಧಾರ ಪ್ರಶ್ನಾರ್ಹವಾಗಿತ್ತು.

2019ರ ಲೋಕಸಭೆಯ ಚುನಾವಣೆಯಲ್ಲಿ ಆಯೋಗವು ನರೇಂದ್ರ ಮೋದಿಯವರ ಕೈಗೊಂಬೆ ಎಂಬಂತೆ ವರ್ತಿಸಿತ್ತು ಎಂಬ ಆರೋಪಗಳು ಅನೇಕ ಸಂದರ್ಭಗಳಲ್ಲಿ ಬಂದಿದ್ದವು. ಗುಜರಾತಿನಲ್ಲಿ ತಮ್ಮ ಮತ ಚಲಾಯಿಸಿ ಹೊರ ಬಂದ ತಕ್ಷಣ ರ್ಯಾಲಿಯಲ್ಲಿ ಪ್ರಯಾಣಿಸಿದ್ದು, ಮತದಾನ ಆರಂಭವಾದ ಕೆಲವೇ ದಿನದಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ತಾನೋರ್ವ ಸಿದ್ಧಪುರುಷನಂತೆ ಕಾಣುವ ಭಾವಚಿತ್ರಗಳನ್ನು ಪ್ರಸರಿಸಿದ್ದು, ಅವರ ಆಕ್ಷೇಪಾರ್ಹವಾದ ಚುನಾವಣಾ ಭಾಷಣಗಳ ಬಗ್ಗೆ ಕೊಟ್ಟ ದೂರುಗಳ ಬಗ್ಗೆ ಆಯೋಗದ ದಿವ್ಯ ನಿರ್ಲಕ್ಷ ಇಂಥ ಘಟನೆಗಳು ಆಯೋಗದ ಸ್ವತಂತ್ರತೆಯ ಬಗ್ಗೆ ಶಂಕೆಯನ್ನು ಉಂಟುಮಾಡಿದ್ದವು. ಮೋದಿಯ ವಿರುದ್ಧದ ದೂರಿನ ವಿಚಾರಣೆಯನ್ನು ವಿಳಂಬಿಸಿದ್ದಕ್ಕೆ ಆಕ್ಷೇಪಿಸಿದ ಇನ್ನೊಬ್ಬ ಚುನಾವಣಾ ಆಯುಕ್ತರಾಗಿದ್ದ ಅಶೋಕ ಲಾವಾಸರ ಕುಟುಂಬದವರ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ, ಆ ಬಳಿಕ ಅವರು ಆಯೋಗದಿಂದ ನಿರ್ಗಮಿಸುವಂತೆ ಮಾಡಿ ಮುಂದೆ ಮುಖ್ಯ ಆಯುಕ್ತರಾಗುವ ಸಾಧ್ಯತೆಯನ್ನು ತಡೆಗಟ್ಟಿದ್ದು- ಮುಂತಾದ ಬೆಳವಣಿಗೆಗಳು ನರೇಂದ್ರ ಮೋದಿಯವರ ಹಿಡಿತಕ್ಕೆ ಚುನಾವಣಾ ಆಯೋಗವೂ ಹೊರತಲ್ಲ ಎಂಬ ಭಾವನೆಗೆ ಪುಷ್ಟಿ ನೀಡಿತ್ತು.

 ಇತ್ತೀಚೆಗೆ ನಡೆದ ಐದು ರಾಜ್ಯಗಳ, ಮುಖ್ಯವಾಗಿ ಬಂಗಾಳದ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಪ್ರಧಾನಿಯವರು ಬಂಗಾಳದಲ್ಲಿ ಬೇರೆ ಬೇರೆ ಕೇಂದ್ರಕ್ಕೆ ಭೇಟಿ ನೀಡಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಮಾಡಿತ್ತು ಎಂಬ ಆಪಾದನೆಯು ಬಂದಿದೆ. ಚುನಾವಣಾ ಸಂಹಿತೆಯ ಉಲ್ಲಂಘನೆಯ ಕುರಿತು ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾರ ಬಗ್ಗೆ ನೀಡಿದ ದೂರುಗಳನ್ನು ವಿಚಾರಿಸಲು ಆಯೋಗ ನಿಧಾನ ಮಾಡಿತು. ಬಿಜೆಪಿಯ ರಾಜ್ಯ ನಾಯಕರಿಗೆ ಹೇರಿದ ನಿಷೇಧವನ್ನು ಅವರು ಕ್ಷಮೆ ಯಾಚಿಸಿದರೆಂದು ಹೇಳಿ ಎರಡು ದಿನದಿಂದ ಒಂದು ದಿನಕ್ಕೆ ಇಳಿಸಿತು. ಕೋವಿಡ್ ಎರಡನೇ ಅಲೆ ದ್ರುತಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮತದಾನದ ದಿನಗಳನ್ನು ಕಡಿತಗೊಳಿಸಬೇಕೆಂಬ ವಿನಂತಿಯನ್ನು ಆಯೋಗ ಮನ್ನಿಸಲಿಲ್ಲ. ಚುನಾವಣಾ ಆಯೋಗದ ಈ ತೆರನಾದ ವರ್ತನೆಗಳು ಅದರ ಸ್ವಾಯತ್ತತೆಯ ಬಗ್ಗೆ ಇನ್ನಿಲ್ಲದ ಶಂಕೆಗಳಿಗೆ ಆಸ್ಪದ ನೀಡಿವೆ.

ಮಾಹಿತಿ ಆಯೋಗ

ಅನೇಕ ವರ್ಷಗಳ ಜನಾಂದೋಲನಗಳ ಪರಿಣಾಮವಾಗಿ 2005ರಲ್ಲಿ ಯುಪಿಎ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಊರ್ಜಿತಗೊಳಿಸಿತು. ಈ ಕಾಯ್ದೆ ಪ್ರಕಾರ ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳು ನಾಗರಿಕರ ಮಾಹಿತಿ ಹಕ್ಕಿನ ಉಲ್ಲಂಘನೆಯಾದಾಗ ಮಧ್ಯಪ್ರವೇಶಿಸಿ ಸರಕಾರಗಳಿಗೆ ಸೂಕ್ತ ಆದೇಶಗಳನ್ನು ನೀಡುತ್ತಿದ್ದವು. ಆಯುಕ್ತರಿಗೆ ಕಾಯ್ದೆಯಲ್ಲಿಯೇ ಅಧಿಕಾರಾವಧಿ ಮತ್ತು ವೇತನ ಭತ್ತ್ಯೆಗಳನ್ನು ನಿರ್ಧರಿಸಿ ಅವರನ್ನು ಸರಕಾರದ ಕೃಪಾಕಟಾಕ್ಷದಿಂದ ಹೊರಗಿಡಲಾಗಿತ್ತು. ಮೋದಿ ಸರಕಾರವು ಈಗ ಮಾಹಿತಿ ಆಯುಕ್ತರ ಅವಧಿಯನ್ನು ಮೊಟಕುಗೊಳಿಸಿದೆ; ಸರಕಾರ ಅವರನ್ನು ಅವಧಿಗಿಂತ ಮೊದಲೇ ವಜಾ ಮಾಡಬಹುದು, ಅವರ ವೇತನ ನಿರ್ಧಾರವನ್ನು ಸರಕಾರದ ವಿವೇಚನೆಗೆ ಬಿಡಲಾಗಿದೆ. ಈ ಕ್ರಮದ ಮೂಲಕ ಸರಕಾರವು ಪಾರದರ್ಶಕತೆಗೂ ಹೊಡೆತ ನೀಡಿದೆ.

ಸರಕಾರದ ಇನ್ನೂ ಕೆಲವು ಅಧೀನ ಸಂಸ್ಥೆಗಳು - ಉದಾಹರಣೆಗೆ ಕೇಂದ್ರ ವಿಚಾರಣಾ ಮಂಡಳಿ (ಸಿಬಿಐ), ಕೇಂದ್ರ ಜಾಗೃತಿ ಆಯೋಗ (ಸಿವಿಸಿ), ಜಾರಿ ನಿರ್ದೇಶನಾಲಯ (ಎನ್‌ಫೋರ್ಸಮೆಂಟ್ ಡೈರೆಕ್ಟೊರೇಟ್) - ಸ್ವತಂತ್ರವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ, ಅವುಗಳನ್ನು ಸಾರಾಸಗಟಾಗಿ ರಾಜಕೀಯ ವಿರೋಧಿಗಳನ್ನು ದಮನಿಸಲು ಉಪಯೋಗಿಸಲಾಗುತ್ತಿದೆ.

ಪ್ರಧಾನಿಯ ಸ್ಥಾನದ ಗೌರವ

ಪ್ರಜಾಪ್ರಭುತ್ವದಲ್ಲಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದವರು ಆ ಸ್ಥಾನದ ಹಿರಿಮೆಯನ್ನು ಎತ್ತಿ ಹಿಡಿಯಬೇಕು. ಸಂಸತ್ತಿನಲ್ಲಿ ಮಾತನಾಡುವಾಗ, ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣ ಕೊಡುವಾಗ, ರಾಜಕೀಯ ಸಭೆಗಳಲ್ಲಿ ಭಾಗವಹಿಸುವಾಗ ಯಾವುದೇ ವಿಷಯದ ಕುರಿತು ಅಥವಾ ವ್ಯಕ್ತಿಯ ಬಗ್ಗೆ ಜವಾಬ್ದಾರಿಯಿಂದ ಮಾತನಾಡಬೇಕು. ಅಲ್ಲಿ ವ್ಯಂಗ್ಯ, ನಂಜು ಅಥವಾ ಕೀಳು ಭಾಷೆಯನ್ನು ಬಳಸುವುದು ಆ ಸ್ಥಾನಕ್ಕೆ ಶೋಭೆಯನ್ನು ತರುವುದಿಲ್ಲ; ಮಾತ್ರವಲ್ಲ ಅದು ಗಣತಂತ್ರದ ಸಂಸ್ಕೃತಿಗೆ ಅಪಚಾರವೆಸಗಿದಂತೆ. ನರೇಂದ್ರ ಮೋದಿಯವರು ಪ್ರಧಾನಿಯ ಸ್ಥಾನದಲ್ಲಿದ್ದುಕೊಂಡು ಈ ನಿಯತ್ತನ್ನು ಪಾಲಿಸಿಕೊಂಡಿಲ್ಲ. ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗರ ಬಗ್ಗೆ ರೈನ್ ಕೋಟಿನ ರೂಪಕದ ಮೋದಿಯವರ ಹೇಳಿಕೆಗಳು, ನಿವೃತ್ತರಾಗುತ್ತಿದ್ದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯವರ ಬೀಳ್ಕೊಡುಗೆಯ ಸಂದರ್ಭದಲ್ಲಿ ವ್ಯಂಗ್ಯಭರಿತ ಮಾತುಗಳು, ಶಶಿ ತರೂರರ ದಿವಂಗತ ಪತ್ನಿಯ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಕುರಿತಾದ ಕೆಲವು ನಾಟಕೀಯ ಉದ್ಗಾರಗಳು ಅವರ ಸ್ಥಾನದ ಗೌರವಕ್ಕೆ ಧಕ್ಕೆಯನ್ನು ಉಂಟುಮಾಡುತ್ತವೆ.

ಮಾಯವಾದ ಪಾರದರ್ಶಕತೆ

ಗಣತಂತ್ರ ಪದ್ಧತಿಯಲ್ಲಿ ಅಧಿಕಾರದಲ್ಲಿರುವವರ ವರ್ತನೆಗಳು ಪಾರದರ್ಶಕವಾಗಿರಬೇಕು; ತಮ್ಮ ನಿರ್ಧಾರಗಳನ್ನು ಸಾರ್ವಜನಿಕ ವಿಮರ್ಶೆಗೆ ಒಡ್ಡಲು ತಯಾರಿರಬೇಕು. ಹಾಗಿದ್ದರೆ ಮಾತ್ರ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಹೆಚ್ಚುತ್ತದೆ. ನರೇಂದ್ರ ಮೋದಿಯವರು ಈ ಏಳು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಸಮ್ಮೇಳನವನ್ನು ನಡೆಸಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಧಾನಿಯವರು ಅಲ್ಲಿಯೇ ಉತ್ತರವನ್ನು ಕೊಡಬೇಕು, ಆದರೆ ಮೋದಿ ಇಂತಹ ಸವಾಲುಗಳಿಂದ ತಪ್ಪಿಸಿಕೊಂಡಿದ್ದಾರೆ. ಮಾತ್ರವಲ್ಲ, ರಾಜಕೀಯ ರ್ಯಾಲಿಗಳಲ್ಲಿ, ದೂರದರ್ಶನ/ಆಕಾಶವಾಣಿಯಲ್ಲಿ ಅಥವಾ ಪಾರ್ಲಿಮೆಂಟಿನಲ್ಲಿಯೂ ಪ್ರಶ್ನೆಗಳನ್ನು ಎದುರಿಸಿಲ್ಲ.

ಮಾಹಿತಿ ಹಕ್ಕಿನ ಕಾಯ್ದೆಯ ಅಡಿಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಯಾವುದೇ ಮಾಹಿತಿಯನ್ನು ಕೇಳಿದರೂ ಫಲಕಾರಿಯಾಗುವುದಿಲ್ಲ. 2020ರಲ್ಲಿ ಸ್ಥಾಪಿಸಿದ ‘ಪಿಎಂ ಕೇರ್ಸ್‌ ಫಂಡ್’ ವಿಚಾರದಲ್ಲಿಯೂ ಪಾರದರ್ಶಕವಾಗಿರಲು ಸರಕಾರ ಬಯಸುತ್ತಿಲ್ಲ.

ಇವೆಲ್ಲದರ ಜೊತೆಗೆ ಗಣತಂತ್ರದ ನಾಲ್ಕನೆಯ ಆಧಾರಸ್ತಂಭವೆನಿಸಿದ ಮಾಧ್ಯಮದ ಮೇಲೂ ಮೋದಿ ಸರಕಾರ ತನ್ನ ಕಬಂಧಬಾಹುವನ್ನು ಹರಡಿದೆ. ಮುಖ್ಯವಾಹಿನಿಯ ಹೆಚ್ಚಿನ ಮಾಧ್ಯಮಗಳು ಆಳುವ ಪಕ್ಷದ ತುತ್ತೂರಿ ಊದುವ ಕೆಲಸವನ್ನು ಮಾಡುತ್ತಿವೆ. ಸರಕಾರವನ್ನು ಪ್ರಶ್ನಿಸುವ ಎದೆಗಾರಿಕೆಯಾಗಲೀ, ಸಾಕ್ಷಿಪ್ರಜ್ಞೆಯಾಗಲೀ ಅವುಗಳಲ್ಲಿ ಇಂದು ಕಾಣಬರುತ್ತಿಲ್ಲ. ವಸ್ತುನಿಷ್ಠ ವಿಶ್ಲೇಷಣೆ ಮಾಡುವ, ವರದಿಗಳನ್ನು ಕೊಡುವ, ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಪತ್ರಿಕೆಗಳನ್ನು, ಟಿವಿ ಸಂಸ್ಥೆಗಳನ್ನು, ಸಾಮಾಜಿಕ ಸುದ್ದಿವಾಹಿನಿಗಳನ್ನು ಸರಕಾರದ ಅಂಗಸಂಸ್ಥೆಗಳ ಮೂಲಕ ಹದ್ದುಬಸ್ತಿನಲ್ಲಿಡುವ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನರೇಂದ್ರ ಮೋದಿಯವರ ಏಳು ವರ್ಷಗಳ ಅವಧಿಯಲ್ಲಿ ಭಾರತದ ಪ್ರಜಾತಂತ್ರದ ವೌಲ್ಯಗಳು ನಶಿಸುತ್ತಿವೆ ಎಂಬುದು ನಿಸ್ಸಂಶಯ.

(ಮುಂದುವರಿಯುವುದು)

Writer - ಟಿ.ಆರ್ ಭಟ್

contributor

Editor - ಟಿ.ಆರ್ ಭಟ್

contributor

Similar News