ಫೆಲೆಸ್ತೀನ್ ನ ‘ಅನಧಿಕೃತ ವಿಲೀನ’ಕ್ಕೆ ಐರ್ಲ್ಯಾಂಡ್ ಸಂಸತ್ ಖಂಡನೆ

Update: 2021-05-27 16:14 GMT
photo: wikipedia

ಡಬ್ಲಿನ್ (ಐರ್ಲ್ಯಾಂಡ್), ಮೇ 27: ಇಸ್ರೇಲ್ ಸರಕಾರವು ಫೆಲೆಸ್ತೀನ್ ಜಮೀನನ್ನು ಇಸ್ರೇಲ್ನೊಂದಿಗೆ ‘ಅನಧಿಕೃತವಾಗಿ ವಿಲೀನಗೊಳಿಸಿರುವುದನ್ನು’ ಖಂಡಿಸುವ ನಿರ್ಣಯವೊಂದನ್ನು ಐರ್ಲ್ಯಾಂಡ್ ಸಂಸತ್ತು ಅಂಗೀಕರಿಸಿದೆ.

ಪ್ರತಿಪಕ್ಷ ಸಿನ್ ಫೀನ್ ಪಾರ್ಟಿ ಮಂಡಿಸಿದ ನಿರ್ಣಯವು ಬುಧವಾರ ಅಂಗೀಕಾರಗೊಂಡಿತು. ನಿರ್ಣಯಕ್ಕೆ ಇತರ ಪಕ್ಷಗಳ ಬೆಂಬಲವೂ ಲಭಿಸಿದೆ.

ಆಕ್ರಮಿತ ಫೆಲೆಸ್ತೀನ್ ಭೂಭಾಗಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಚಟುವಟಿಕೆಗಳನ್ನು ‘ಅನಧಿಕೃತ ವಿಲೀನ’ ಎಂಬುದಾಗಿ ಬಣ್ಣಿಸಿದ ಮೊದಲ ಐರೋಪ್ಯ ಒಕ್ಕೂಟದ ದೇಶ ಐರ್ಲ್ಯಾಂಡ್ ಆಗಿದೆ.

ಈ ನಿರ್ಣಯದ ಹಿನ್ನೆಲೆಯಲ್ಲಿ, ಫೆಲೆಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಪರಾಧಗಳನ್ನು ಹೊಸ ಬಲ ಮತ್ತು ತೀವ್ರತೆಯೊಂದಿಗೆ ಎದುರಿಸಬೇಕು ಎಂದು ಸಂಸತ್ನಲ್ಲಿ ಮತದಾನ ನಡೆದ ಬಳಿಕ ಟ್ವಿಟರ್ನಲ್ಲಿ ಹಾಕಿದ ಹೇಳಿಕೆಯಲ್ಲಿ ಸಿನ್ ಫೀನ್ ಪಾರ್ಟಿಯ ನಾಯಕಿ ಮೇರಿ ಲೂ ಮೆಕ್ಡೊನಾಲ್ಡ್ ಹೇಳಿದ್ದಾರೆ.

ಈ ನಿರ್ಣಯವು ಫೆಲೆಸ್ತೀನೀಯರಿಗೆ ನೀಡಿದ ದೊಡ್ಡ ಬೆಂಬಲವಾಗಿದೆ ಎಂದು ಐರ್ಲ್ಯಾಂಡ್ಗೆ ಫೆಲೆಸ್ತೀನಿ ರಾಯಭಾರಿ ಜಿಲಾನ್ ವಹ್ಬಾ ಅಬ್ದುಲ್ ಮಜೀದ್ ಹೇಳಿದರು.

‘‘ಇಸ್ರೇಲ್ನೊಂದಿಗೆ ಫೆಲೆಸ್ತೀನ್ನ ಅನಧಿಕೃತ ವಿಲೀನಕ್ಕೆ ಸಂಬಂಧಿಸಿ ಈ ನಿರ್ಣಯವು ಫೆಲೆಸ್ತೀನ್ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದೆ’’ ಎಂದು ‘ದ ಟೈಮ್ಸ್’ ಪತ್ರಿಕೆಯೊಂದಿಗೆ ಮಾತನಾಡುತ್ತಾ ಅವರು ಹೇಳಿದರು. ಸಿನ್ ಫೀನ್ ಪಕ್ಷದ ವಕ್ತಾರ ಜಾನ್ ಬ್ರಾಡಿ, ಈ ನಿರ್ಣಯವನ್ನು ‘ಐತಿಹಾಸಿಕ’ ಎಂಬುದಾಗಿ ಬಣ್ಣಿಸಿದರು ಹಾಗೂ ಐರ್ಲ್ಯಾಂಡ್ನ ಮಾದರಿಯನ್ನು ಇತರ ದೇಶಗಳೂ ಅನುಸರಿಸುವುದು ಎಂಬುದಾಗಿ ಆಶಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News