×
Ad

ಗೋಹತ್ಯೆ ನಿಷೇಧ ಪ್ರಶ್ನಿಸಿ ಅರ್ಜಿ: ಆಕ್ಷೇಪಣೆ ಸಲ್ಲಿಸದಿದ್ದರೆ ಕಾಯ್ದೆಗೆ ತಡೆ ನೀಡುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2021-05-27 22:48 IST

ಬೆಂಗಳೂರು, ಮೇ 27: ರಾಜ್ಯ ಸರಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಕಾಯ್ದೆ-2020 ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ವಿಳಂಬ ಮಾಡಿರುವ ರಾಜ್ಯ ಸರಕಾರಕ್ಕೆ ಕೊನೆಯ ಅವಕಾಶ ನೀಡಿರುವ ಹೈಕೋರ್ಟ್, ಇನ್ನಷ್ಟು ವಿಳಂಬ ಮಾಡಿದರೆ ಕಾಯ್ದೆ ತಡೆಯ ಮನವಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ನಗರದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸೇರಿ ಮತ್ತಿತರರು ಕಾಯ್ದೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್‌ಗಳ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಸರಕಾರದ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ ಕೊರೋನ ಉಲ್ಬಣವಾಗಿರುವುದರಿಂದ ಆಕ್ಷೇಪಣೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಆದುದರಿಂದ, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ, ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರು, ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಲು ಸುಖಾಸುಮ್ಮನೆ ವಿಳಂಬ ಮಾಡುತ್ತಿದೆ. ಕೊರೋನ ನೆಪವನ್ನು ಹೇಳುವುದು ಸರಿಯಲ್ಲ. ಆಕ್ಷೇಪಣೆ ಸಲ್ಲಿಕೆಗೆ ಯಾವ ಅಡಚಣೆಯೂ ಇಲ್ಲ. ಈ ಹಿಂದೆ ಸರಕಾರ ಜಾನುವಾರು ಸಾಗಿಸುವವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಕೋರ್ಟ್ ಗೆ ಭರವಸೆ ನೀಡಿತ್ತು.

ಆದರೆ, ಕಾಯ್ದೆಯ ಸೆಕ್ಷನ್ 8ರ ಅಡಿ ಜಾನುವಾರು ಸಾಗಿಸುವವರ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಹೀಗಾಗಿ, ಸರಕಾರಕ್ಕೆ ಮತ್ತೆ ಕಾಲಾವಕಾಶ ನೀಡಬಾರದು. ಜತೆಗೆ ಕಾಯ್ದೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕೊನೆಯ ಅವಕಾಶ ನೀಡುತ್ತೇವೆ. ಮುಂದಿನ ವಿಚಾರಣೆ ವೇಳೆಗೆ ಸರಕಾರ ಆಕ್ಷೇಪಣೆ ಸಲ್ಲಿಸಲು ವಿಫಲವಾದರೆ, ಕಾಯ್ದೆಗೆ ತಡೆ ನೀಡುವಂತೆ ಕೋರಿರುವ ಅರ್ಜಿದಾರರ ಮಧ್ಯಂತರ ಮನವಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿ, ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News