ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್ ಗೆ ಮೈಸೂರಿನ ಚಲುವಾಂಬ ಮಕ್ಕಳ ಆಸ್ಪತ್ರೆ ಆಯ್ಕೆ

Update: 2021-05-27 18:23 GMT

ಮೈಸೂರು,ಮೇ 27: ಕೊರೋನ ಲಸಿಕೆ ಮಕ್ಕಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದೇ ಎಂಬುದನ್ನು ತಿಳಿಯಲು ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಮುಂದಾಗಿದ್ದು, ಪ್ರಾಯೋಗಿಕವಾಗಿ ಕ್ಲಿನಿಕಲ್ ಟೆಸ್ಟ್ ಮಾಡಲು ಮೈಸೂರಿನ ಚಲುವಾಂಬ ಮಕ್ಕಳ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದೆ.

ಮಕ್ಕಳ ಮೇಲೆ ಲಸಿಕೆ ತಯಾರು ಮಾಡಲು ಮುಂದಾಗಿರುವ ಭಾರತ್ ಬಯೋಟೆಕ್ ಕಂಪನಿ ಈಗಾಲೇ ದೇಶದ ಐದು ಕೇಂದ್ರಗಳಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು, ಅದರಲ್ಲಿ ಮೈಸೂರಿನ ಚಲುವಾಂಬ ಮಕ್ಕಳ ಆಸ್ಪತ್ರೆಯೂ ಒಂದು ಎಂದು ತಿಳಿದು ಬಂದಿದೆ.

ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೆ ಮಕ್ಕಳ ರೋಗ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚಿಸುವ ಸಲುವಾಗಿ ಲಸಿಕೆ ಪರಿಣಾಮಕಾರಿಯಾಗಿವುದೇ ಎಂಬುದನ್ನು ತಿಳಿಯಲು ಕೋವ್ಯಾಕ್ಸಿನ್ ಲಸಿಕೆ ತಯಾರು ಮಾಡುತ್ತಿರುವ ಭಾರತ್ ಭಯೋಟೆಕ್ ಕಂಪನಿ ಮಕ್ಕಳ ಮೇಲೆ ಪ್ರಯೋಗ ಮಾಡಲು ಮುಂದಾಗಿದ್ದು, ಚಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟೆಸ್ಟ್ ನಡೆಸಲು ಇನ್ನೊಂದು ವಾರದಲ್ಲಿ ಪ್ರಾಯೋಗಿಕ ಕಾರ್ಯ ಆರಂಭವಾಗಲಿದೆ. 

ಈಗಾಗಲೇ ಭಾರತ್ ಭಯೋಟೆಕ್ ಕಂಪನಿ ಮುಖ್ಯಸ್ಥ ಡಾ.ಕೃಷ್ಣ ಯಲ್ಲಾ, ಮೈಸೂರು ಮೆಡಿಕಲ್ ಕಾಲೇಜು ಡೀನ್ ಡಾ.ನಂಜರಾಜು, ಚಲುವಾಂಭ ಮಕ್ಕಳ ಆಸ್ಪತ್ರೆ ಅಧೀಕ್ಷಕಿ ಡಾ.ಸುಧಾ ಅವರ ಜೊತೆ ಮಾತುಕತೆ ನಡೆಸಿ ತಾಂತ್ರಿಕೆ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲು ಬೇಕಾಗುವ ತಂತ್ರಜ್ಞಾನ ಲ್ಯಾಬ್‍ಗಳನ್ನು ಸಿದ್ದಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ 60 ವರ್ಷ ಮೇಲ್ಪಟ್ಟರಿಗೆ ಮಧ್ಯವಯಸ್ಕರಿಗೆ ಕೋವ್ಯಾಕ್ಸಿನ್ ಲಸಿಕೆ ತಯಾರು ಮಾಡಿ ಬೇಡಿಕೆ ಹೊಂದಿರುವ ಭಾರತ್ ಬಯೋಟೆಕ್ ಕಂಪನಿ  ಮಕ್ಕಳಿಗೂ ಲಸಿಕೆ ತಯಾರಿಸುವ ಗುರಿ ಹೊಂದಿದ್ದು, ಪ್ರಾಯೋಗಿಕವಾಗಿ ಮಕ್ಕಳ ಮೇಲೆ ಈ ಲಸಿಕೆಯನ್ನು ಪ್ರಯೋಗ ಮಾಡಲಿದೆ. ಈ ಸಲುವಾಗಿ ಚಲುವಾಂಭ ಮಕ್ಕಳ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡು ಅಂತಿಮ ಸಿದ್ಧತೆ ನಡೆಸಿದೆ.

ಲಸಿಕೆ ತಯಾರಿಕೆಗೆ ಮುಂದಾಗಿರುವ ಭಾರತ್ ಬಯೋಟೆಕ್ 10 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮಾಡಲಿದೆ. ಲಸಿಕೆ ನೀಡಿದ ನಂತರ ಮಕ್ಕಳ ದೇಹದಲ್ಲಿ ಉಂಟಾಗುವ ಪರಿಣಾಮವನ್ನು ಗಮನಿಸಲು ಪ್ರತ್ಯೇಕ ವಾರ್ಡ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರ ಜೊತೆಗೆ ಮಕ್ಕಳ ರೋಗ ನಿರೋಧಕ ಶಕ್ತಿ ಎಷ್ಟರ ಮಟ್ಟಿಗೆ ವೃದ್ಧಿಯಾಗಲಿದೆ ಎಂಬುದನ್ನು ತಿಳಿಯಲಿದೆ. ಪ್ರಯೋಗಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳು ಅಂತಿಮಗೊಂಡಿದ್ದು, ಇನ್ನೊಂದು ವಾರದಲ್ಲಿ ಕೋವ್ಯಾಕ್ಸಿನ್ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್ ಆರಂಭವಾಗಲಿದೆ. 

ಇಬ್ಬರು ಸಹಪ್ರಾಧ್ಯಾಪಕರಿಗೆ ಉಸ್ತುವಾರಿ: ಮಕ್ಕಳ ಮೇಲೆ ಲಸಿಕೆ ತಯಾರು ಮಾಡಲು ಮುಂದಾಗಿರುವ ಭಾರತ್ ಬಯೋಟೆಕ್ ಕಂಪನಿ ಜೊತೆ ಕೈಜೋಡಿಸಿ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್ ಉಸ್ತುವಾರಿಯನ್ನು ಚಲುವಾಂಬ ಮಕ್ಕಳ ಆಸ್ಪತ್ರೆಯ ಸಹಪ್ರಾಧ್ಯಪಕರಾದ ಡಾ.ಪ್ರದೀಪ್ ಮತ್ತು ಡಾ.ಎಸ್.ಪ್ರಶಾಂತ್ ಅವರಿಗೆ ನೀಡಲಾಗಿದೆ.

ಲಸಿಕೆ ತಯಾರಿಕಾ ಕಂಪನಿಯಾದ ಹೈದರಬಾದ್‍ನ ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಮೈಸೂರು ಮೆಡಿಕಲ್ ಕಾಲೇಜಿನ ಚಲುವಾಂಭ ಮಕ್ಕಳ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದೆ. ಈ ಸಂಬಂಧ ಮುಂದಿ ವಾರದಲ್ಲಿ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್ ಆರಂಭಿಸಲಿದೆ.
-ಡಾ.ನಂಜರಾಜ್, ಡೀನ್, ಮೈಸೂರು ಮೆಡಿಕಲ್ ಕಾಲೇಜು

ಕೋರೋನ ಸೋಂಕು ದೇಹದಲ್ಲಿ ಮೊದಲ ಬಾರಿಗೆ ಲಗ್ಗೆ ಇಡುವುದೇ 'ಎಸಿಇ ರೆಸೆಪ್ಟರ್' ಮೂಲಕ. ಇದು ಮಕ್ಕಳ ದೇಹದಲ್ಲಿ ಬೆಳವಣಿಗೆಯಾಗಿರುವುದಿಲ್ಲ. 'ಎಸಿಇ ರೆಸೆಪ್ಟರ್' ಕಡಿಮೆ ಇರುವುದರಿಂದ ಕೊರೋನ ಸೋಂಕು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖ್ಯಾತ ಮಕ್ಕಳ ತಜ್ಞ ಚಲುವಾಂಬ ಮಕ್ಕಳ ಆಸ್ಪತ್ರೆಯ ಆರ್‍ಎಂಓ ಡಾ.ರಾಜೇಂದ್ರ ಕುಮಾರ್ ತಿಳಿಸಿದರು.

ಕೋವಿಡ್ ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ, ಆದರೆ ಮಕ್ಕಳ ಮೇಲೆ ಕೊರೋನ ಸೋಂಕು ಕಾಣಿಸಿಕೊಂಡಿದೆ. ಅದು ಗಂಭೀರವಾಗಿಲ್ಲ, ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಜ್ವರ, ನೆಗಡಿ, ಕೆಮ್ಮು, ಬೇದಿ ಸ್ವಲ್ಪ ಮಟ್ಟಿಗೆ ಉಸಿರಾಟದ ತೊಂದರೆಗಳು ಬರುತ್ತವೆ. ಚಿಕಿತ್ಸೆ ನೀಡಿದರೆ ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾಗಲಿದ್ದಾರೆ ಎಂದರು.

ಮಕ್ಕಳ ಮೇಲೆ ವಿಶೇಷವಾದ “ಮಲ್ಟಿ ಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್” ಕಾಣಿಸಿಕೊಳ್ಳುತ್ತಿದೆ. ಕೊರೋನ ಸೋಂಕಿನಿಂದ ಗುಣಮುಖರಾದ 2 ಅಥವಾ 3 ವಾರದ ನಂತರ ಇದು ಕಾಣಿಸಿಕೊಳ್ಳುತ್ತದೆ. ಅಧಿಕ ಬಿಪಿ, ಹೃದಯಾಘಾತವಾಗುವುದು, ರಕ್ತಸ್ರಾವ, ಪ್ಲೇಟ್ ಲೆಟ್ ಕಡಿಮೆ, ಪಿಡಿಸು ಬುರುವುದು ಕಾಣಿಸುತ್ತದೆ. ಅಂತಹ ಗಂಭೀರತೆ ಕಂಡು ಬಂದರೆ ಮಕ್ಕಳ ಸಾವಿಗೆ ಕಾರಣವಾಗಲಿದೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕಿದೆ ಎಂದು ಹೇಳಿದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News