ಚೋಕ್ಸಿಯ ಗಡಿಪಾರು ಈಗ ಸಾಧ್ಯವಿಲ್ಲ: ಆ್ಯಂಟಿಗ ದೇಶದ ನ್ಯಾಯಾಲಯ ತೀರ್ಪು; ಕಾನೂನು ನೆರವು

Update: 2021-05-28 16:28 GMT

ರೂಸೋ (ಡೊಮಿನಿಕ), ಮೇ 28: ಭಾರತದ ಬ್ಯಾಂಕ್ ಗಳಿಗೆ ಸುಮಾರು 14,000 ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಗಡಿಪಾರಿಗೆ ಡೋಮಿನಿಕ ದೇಶದ ನ್ಯಾಯಾಲಯವೊಂದು ಗುರುವಾರ ತಡೆಯಾಜ್ಞೆ ನೀಡಿದೆ.

ಆ್ಯಂಟಿಗ ದೇಶದಿಂದ ತಪ್ಪಿಸಿಕೊಂಡು ಕ್ಯೂಬಾಕ್ಕೆ ಪಲಾಯನಗೈಯುವ ಯೋಜನೆಯ ಭಾಗವಾಗಿ ಡೊಮಿನಿಕಾ ದ್ವೀಪ ರಾಷ್ಟ್ರವನ್ನು ತಲುಪಿದ್ದ ಚೊಕ್ಸಿಯನ್ನು ಇಂಟರ್ಪೋಲ್ ಸೂಚನೆಯಂತೆ ಅಲ್ಲಿನ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. 

ಅವರು 2018ರಲ್ಲಿ ಭಾರತದಿಂದ ಪಲಾಯನಗೈದಂದಿನಿಂದ ಆ್ಯಂಟಿಗ ದ್ವೀಪ ದೇಶದಲ್ಲಿ ವಾಸಿಸುತ್ತಿದ್ದಾರೆ.

ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಕಳುಹಿಸಿ ಎಂಬುದಾಗಿ ಆ್ಯಂಟಿಗ ದೇಶದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ನೆರೆಯ ಡೊಮಿನಿಕಾ ದೇಶಕ್ಕೆ ಸೂಚಿಸಿದ್ದರು. ಆದರೆ, ಇದನ್ನು ಚೋಕ್ಸಿಯ ವಕೀಲರು ವಿರೋಧಿಸಿದ್ದಾರೆ. ಚೋಕ್ಸಿ ಈಗ ಭಾರತದ ಪ್ರಜೆ ಅಲ್ಲದಿರುವುದರಿಂದ ನೇರವಾಗಿ ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂಬುದಾಗಿ ಅವರು ವಾದಿಸಿದ್ದಾರೆ. ವಿಚಾರಣೆ ಶುಕ್ರವಾರ (ಸ್ಥಳೀಯ ಕಾಲಮಾನ)ವೂ ಮುಂದುವರಿಯಲಿದೆ.

ಡೊಮಿನಿಕಾದಲ್ಲಿರುವ ಚೋಕ್ಸಿಯ ವಕೀಲರ ತಂಡವು ಅವರ ಪರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಚೋಕ್ಸಿಯ ದೇಹದಲ್ಲಿ ‘ಹಿಂಸೆಯ ಗುರುತು’ಗಳು ಕಂಡುಬಂದಿವೆ ಎಂದೂ ಅವರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News